ಕಡಬ:ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬ ಬಳಿ ನಡೆದಿದೆ. ಧರ್ಮಸ್ಥಳ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೇಪು ಲಕ್ಷ್ಮಿ ಜನಾರ್ಧನ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದೆ. ಬೆಂಗಳೂರಿನ ದಾಸರಹಳ್ಳಿಯ ನಾಗರತ್ಮಮ್ಮ( 58ವ) ಮೃತಪಟ್ಟವರು ಎಂದು ತಿಳಿದು ಬಂದಿದೆ.


ಮೂಲತಃ ಬೆಂಗಳೂರಿನಿವರಾಗಿದ್ದ ಇವರು ತಮ್ಮ ಕುಟುಂಬಸ್ಥರೊಂದಿಗೆ ಬೆಂಗಳೂರಿನಿಂದ ರೈಲು ಮೂಲಕ ಬಂದು ನೆಟ್ಟಣದಲ್ಲಿ ಬಂದಿಳಿದಿದ್ದರು. ಅಲ್ಲಿಂದ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಧರ್ಮಸ್ಥಳಕ್ಕೆ ತೆರಳಲು ಬಸ್ ಏರಿ, ಬಸ್ಸಿನ ಮುಂಭಾಗದಲ್ಲಿ ಕುಳಿತ್ತಿದ್ದರು. ಮಹಿಳೆಯು ಕೇಪು ದೇವಸ್ಥಾನದ ಬಳಿ ಬಸ್ ತಲುಪುತ್ತಿದ್ದಂತೆ ಬ್ಯಾಗ್ ತೆಗೆದುಕೊಳ್ಳಲು ಹಿಂಬದಿಗೆ ಹೋಗಿದ್ದರು ಎನ್ನಲಾಗಿದೆ. ತಿರುವು ರಸ್ತೆಯಲ್ಲಿ ಬಸ್ ಚಲಿಸಿದ ಹಿನ್ನೆಲೆ ಬಸ್ ನ ಹಿಂಬದಿ ಬಾಗಿಲು ಹಾಕದ ಕಾರಣ ಏಕಾಏಕಿ ಮಹಿಳೆ ಬಸ್ ನಿಂದ ಹೊರಗೆ ಎಸೆಯಲ್ಪಟ್ಟು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.