ಹಂಪಿಯ ಪ್ರವಾಸಿ ಮಾರ್ಗದರ್ಶಕ, ಆಟೋ ಚಾಲಕನಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಬೆಲ್ಜಿಯಂ ಯುವತಿ ಇನ್ನೂ ಕರ್ನಾಟಕದ ಸೊಸೆಯಾಗಿದ್ದಾಳೆ. ಈ ಅಪರೂಪದ ಮದುವೆಯ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ. ಬೆಲ್ಜಿಯಂ ಯುವತಿ ಭಾರತದ, ಅದೂ ನಮ್ಮ ಕರ್ನಾಟಕದ ವಿಜಯನಗರದ ಯುವಕನೋರ್ವನ ಜೊತೆ ಹಸೆಮಣೆ ಏರಿದ್ದಾಳೆ. ಹೌದು, ಇಂತಹ ಅಪರೂಪದ ಮದುವೆಯೊಂದು ನಡೆದಿದೆ. ಹಂಪಿ ನಿವಾಸಿಯಾದ ಅನಂತರಾಜು ಮತ್ತು ಬೆಲ್ಜಿಯಂ ದೇಶದ ಯುವತಿ ಕೆಮಿಲ್ ಪರಸ್ಪರ ಪತಿ ಪತ್ನಿಯಾಗಿದ್ದಾರೆ. ಅನಂತರಾಜು ಆಟೋ ಚಾಲಕ, ಹಾಗೂ ಹಂಪಿ ಮಾರ್ಗದರ್ಶಿಯಾಗಿ ಐತಿಹಾಸಿಕ ತಾಣವಾದ ಹಂಪಿ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಪ್ರವಾಸಿಗರಿಗೆ ವಿಸ್ತಾರವಾಗಿ ವಿವರಿಸುವ ಕಾಯಕ ಮಾಡುತ್ತಿದ್ದರು.

ಇದೀಗ ಹಂಪಿಯ ಪ್ರವಾಸಿ ಮಾರ್ಗದರ್ಶಕ, ಆಟೋ ಚಾಲಕನಿಗೆ ಅದೃಷ್ಟ ಕುದುರಿದೆ. ಮೂರು ವರ್ಷದ ಹಿಂದೆ ಹಂಪಿಯ ಗತವೈಭವವನ್ನು ಅರಿಯಲು ಬೆಲ್ಜಿಯಂ ದೇಶದಿಂದ ಹಂಪಿಗೆ ಆಗಮಿಸಿದ್ದ ಮರಿಯನ್ನೇ ಜೀಮ್ ಫಿಲಿಪ್ಪೆ ಅವರ ಕುಟುಂಬಕ್ಕೆ ಆಟೋ ಚಾಲಕ ಅನಂತರಾಜುವಿನ ಪರಿಚಯವಾಗಿತ್ತು. ಅನಂತರಾಜು ಪ್ರಾಮಾಣಿಕ ಆಟೋ ಚಾಲಕ ಎನ್ನುವುದರೊಂದಿಗೆ ಉತ್ತಮ ಮಾರ್ಗದರ್ಶಕ ಆಗಿಯೂ ಅವರ ಮನಗೆದ್ದಿದ್ದರು. ಇದೇ ವೇಳೆ ಮರಿಯನ್ನೇ ಜೀಮ್ ಫಿಲಿಪ್ಪೆ ಅವರ ಮೂರನೇ ಮಗಳು ಕೆಮಿಲ್ ಹಂಪಿಯ ನಿಸರ್ಗದ ಸೊಬಗಿಗೆ ಮನಸೋತಿದ್ದರು. ಜೊತೆಗೆ ಅನಂತರಜು ಕೆಮಿಲ್ ಅವರ ಪರಿವಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಈ ಮಧ್ಯೆ ಪ್ರವಾಸಿ ಮಾರ್ಗದರ್ಶಕ ಅನಂತರಾಜು ಅವರ ಮೇಲೆ ಯುವತಿ ಕೆಮಿಲ್ಗೆ ಪ್ರೇಮ ಅರಳಿತ್ತು. ಇಬ್ಬರೂ ಮದುವೆಯಾಗುವುದಾಗಿ ನಿರ್ಧಾರವೂ ಆಗಿತ್ತು. ಆದರೆ ಈ ಕೋವಿಡ್ 19 ನಿಂದಾಗಿ ಮದುವೆ ಮುಂದೂಡಿತು. ಆದರೂ ಈ ಇಬ್ಬರು ಪ್ರೇಮಿಗಳ ತಾಳ್ಮೆಯಿಮದ ಕಾಯುತ್ತಿದ್ದರು. ಕೆಮಿಲ್ ಕುಟುಂಬದವರಿಗೆ ಮಗಳ ವಿವಾಹನ್ನು ಬೆಲ್ಜಿಯಂ ದೇಶದಲ್ಲೇ ಅದ್ದೂರಿ ವೈಭವದೊಂದಿಗೆ ಮಾಡಬೇಕೆಂಬ ಮನಸ್ಸಿದ್ದರೂ, ಹಿಂದೂ ಸಂಪ್ರದಾಯದಂತೆ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳಬೇಕೆಂಬ ಯುವಕನ ಆಸೆಗೆ ಸಹಮತ ಸೂಚಿಸಿದರು. 50ಕ್ಕೂ ಅಧಿಕ ಜನ ಬೆಲ್ಜಿಯಂ ದೇಶದಿಂದ ಆಗಮಿಸಿ ಗುರುವಾರ ಸಂಜೆ ಕುಟುಂಬ ಪರಿವಾರದೊಂದಿಗೆ ನಿಶ್ಚಿತಾರ್ಥ ನೆರವೇರಿಸಿದ್ದರು.