ದೇಶದಾದ್ಯಂತ ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗ ಕರ್ನಾಟಕದಲ್ಲಿಯೂ ಕಾಣಿಸಿಕೊಂಡಿದ್ದು, ಹೈನುಗಾರರ ನಿದ್ದೆಗೆಡಿಸಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈ ರೋಗವು ವ್ಯಾಪಕವಾಗಿ ಈಗಾಗಲೇ ಹರಡಿದ್ದು, ಅದೃಷ್ಟವಶಾತ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೋಗ ಕಂಡುಬಂದಿಲ್ಲ. ಆದರೆ ಬಂಟ್ವಾಳದ ಹಳ್ಳಿ ಒಂದರಲ್ಲಿ ಒಂದು ಶಂಕಿತ ಪ್ರಕರಣ ವರದಿಯಾಗಿದ್ದು, ಪ್ರಯೋಗಾಲಯದ ವರದಿಗಳ ನಿರೀಕ್ಷೆಯಲ್ಲಿವೆ. ಆದರೂ ಈ ರೋಗದ ಬಗ್ಗೆ ಜಾನುವಾರು ಮಾಲೀಕರಿಗೆ ಅನುಸರಿಸಬೇಕಾದ ಅಗತ್ಯ ಮಾಹಿತಿಗಳು ಇಲ್ಲಿವೆ. ಸುಳ್ಯ ತಾಲೂಕಿನಲ್ಲಿ ಈ ಹಿಂದೆ 2020 ರಲ್ಲಿ ಸಣ್ಣ ಪ್ರಮಾಣದಲ್ಲಿ ಈ ರೋಗವು ಕಂಡುಬಂದಿದ್ದವು ಸಕಾಲಿಕ ಚಿಕಿತ್ಸೆ ಮತ್ತು ನಿಯಂತ್ರಣ ಕ್ರಮಗಳಿಂದ ಅಂದು ಈ ರೋಗ ಹೆಚ್ಚಾಗಿ ಹರಡಲಿಲ್ಲ. ಆದರೆ ಈ ಬಾರಿ ಕರ್ನಾಟಕದ ಬಹಳಷ್ಟು ಭಾಗಗಳಲ್ಲಿ ಕಂಡು ಬಂದಿರುವುದರಿಂದ ವಿಪರೀತವಾದ ಪರಿಣಾಮಗಳನ್ನು ಮತ್ತು ಬಹಳಷ್ಟು ಸಾವು ನೋವುಗಳನ್ನು ಉಂಟುಮಾಡುತ್ತಿದೆ.

ಚರ್ಮ ಗಂಟು ರೋಗವು ಕ್ಯಾಪ್ರಿ ಪೋಕ್ಸ್ ಎಂಬ ವೈರಾಣುವಿನಿಂದ ಉದ್ಭವಿಸುತ್ತವೆ. ಇದು ಕೇವಲ ಹಸು ಮತ್ತು ಎಮ್ಮೆಗಳಿಗೆ ಮಾತ್ರ ಬಾಧಿಸುವ ರೋಗವಾಗಿದೆ ಈ ವೈರಾಣು ಯಾವುದೇ ಕಾರಣಕ್ಕೂ ಮನುಷ್ಯರಲ್ಲಿ ರೋಗವನ್ನು ಉಂಟುಮಾಡುವುದಿಲ್ಲ.

ರೋಗಲಕ್ಷಣಗಳು

ಅತಿಯಾದ ಜ್ವರ ಸುಮಾರು 103-106°F, ಜಾನುವಾರುಗಳು ಆಹಾರ ನಿರಾಕರಣೆ ಮಾಡುತ್ತದೆ, ಹಾಲಿನ ಇಳುವರಿ ಕುಸಿತವಾಗುವುದು, ದೇಹದ ಮೇಲೆ ಸುಮಾರು 2-5 ಸೆಂಟಿ ಮೀಟರ್ ಗಾತ್ರದ ಗಡ್ಡೆಗಳು ಅಥವಾ ಗಂಟುಗಳು ಕಾಣಿಸಿಕೊಳ್ಳುವುದು ಈ ಗಂಟುಗಳು ಚರ್ಮವನ್ನು ಸುಲಿದಂತೆ ಒಡೆದು ಗಾಯವಾಗುವುದು. ಈ ಗಂಟುಗಳು ವಿಪರೀತ ತುರಿಕೆಯನ್ನು ಉಂಟುಮಾಡುವುದರಿಂದ ಜಾನುವಾರುಗಳು ನೆಕ್ಕಿಕೊಂಡು ಬಹಳಷ್ಟು ದೊಡ್ಡ ಗಾಯಗಳಾಗುತ್ತವೆ. ಈ ಗಾಯಗಳು ನೊಣಗಳನ್ನು ಆಕರ್ಷಿಸಿ, ಬಂದಂತಹ ನೊಣಗಳು ಗಾಯದಲ್ಲಿ ಮೊಟ್ಟೆಯನ್ನು ಇಟ್ಟು, ಹುಳ ತುಂಬಿ ಆಳವಾದ ರಂಧ್ರಗಳಾಗುತ್ತವೆ. ಗರ್ಭ ಧರಿಸಿದ ಜಾನುವಾರುಗಳಲ್ಲಿ ಗರ್ಭಪಾತವಾಗುತ್ತದೆ.
ರತ ಅಂತಿಮವಾಗಿ ಸರಿಯಾದ ಪೋಷಣೆ ಇಲ್ಲದ ಮತ್ತು ಚಿಕಿತ್ಸೆ ಫಲಕಾರಿಯಾಗದ ಜಾನುವಾರುಗಳು ಶ್ವಾಸಕೋಶದ ಸೋಂಕಿಗೆ ಒಳಗಾಗಿ ಸಾವನ್ನಪ್ಪುತ್ತವೆ

ರೋಗದ ಹರಡುವಿಕೆ

• ರೋಗ ತಗುಲಿದ ಪ್ರಾಣಿಯಿಂದ ರಕ್ತ ಹೀರುವ ಸೊಳ್ಳೆ ನೊಣಗಳು ಮತ್ತು ಉಣ್ಣೆ ಈ ರೋಗವನ್ನು ಆರೋಗ್ಯವಂತ ಜಾನುವಾರಿಗೆ ಹರಡುತ್ತವೆ
• ಸೋಂಕುಗ್ರಸ್ತ ಜಾನುವಾರಿನ ರಕ್ತ ಕೀವು ದೈಹಿಕ ಶ್ರಾವಗಳ ಸಂಪರ್ಕದಿಂದಲೂ ಈ ರೋಗವು ಹರಡಬಹುದು.
ಸೋಂಕಿತ ಜಾನುವಾರುಗಳನ್ನು ಆರೋಗ್ಯವಂತ ಜಾನುವಾರುಗಳು ನೆಕ್ಕುವುದರಿಂದ ಅಥವಾ ಮುಟ್ಟುವುದರಿಂದ ಈ ರೋಗ ಹರಡಬಹುದು

• ಸೋಂಕು ತಗಲಿದ ಒಂದು ವಾರದಿಂದ ಐದು ವಾರದೊಳಗಾಗಿ ರೋಗಲಕ್ಷಣಗಳು ಪ್ರಾರಂಭವಾಗಬಹುದು

ರೋಗ ಹರಡದಂತೆ ವಹಿಸಬೇಕಾದ ಕ್ರಮಗಳೇನು?

• ರೋಗಪೀಡಿತ ಜಾನುವಾರುಗಳನ್ನು ಆರೋಗ್ಯವಂತ ಜಾನುವಾರುಗಳಿಂದ ಬೇರ್ಪಡಿಸಬೇಕು. ಜಾನುವಾರು ಸಾಗಾಟ ಮತ್ತು ಅನವಶ್ಯಕವಾಗಿ ಜಾನುವಾರುಗಳನ್ನು ಬೀಡಾಡಿಯಾಗಿ ತಿರುಗಾಡಲು ಬಿಡುವುದು ತಪ್ಪಿಸಬೇಕು.
ಸೊಳ್ಳೆ ನೊಣಗಳ ಹಾವಳಿಯಿಂದ ತಪ್ಪಿಸಲು ವೈದ್ಯಕೀಯ ದೃಢೀಕೃತ ಕೀಟನಾಶಕ ಔಷಧಿಗಳನ್ನು ಉಪಯೋಗಿಸಬೇಕು. ಜಿಲ್ಲೆಯಲ್ಲಿ ಈಗಾಗಲೇ ಈ ಬಗ್ಗೆ ಕ್ರಮವೆಂಬಂತೆ ಮಾನ್ಯ ಜಿಲ್ಲಾಧಿಕಾರಿಯವರು ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿಯತಕಾಲಿಕವಾಗಿ ಫಾಗಿಂಗ್ ಮಾಡಲು ಸೂಚನೆ ನೀಡಿರುತ್ತಾರೆ.
• ಆರೋಗ್ಯವಂತ ಜಾನುವಾರುಗಳ ಚರ್ಮಕ್ಕೆ ಬೇವಿನ ಎಣ್ಣೆ ಅಥವಾ ಹೊಂಗೆ ಎಣ್ಣೆಯನ್ನು ತೆಳ್ಳಗೆ ಹಚ್ಚುವುದರಿಂದ ರಕ್ತ ಹೀರುವ ಕೀಟಗಳ ತೊಂದರೆಯನ್ನು ತಪ್ಪಿಸಬಹುದು.
• ದನದ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಬೇಕು ಸೂಕ್ತವಾದ ನಂಜು ನಿವಾರಕಗಳನ್ನು ಮತ್ತು ಫಿನೈಲ್ ನಂಥಹಾ ಸ್ವಚ್ಛತಾ ದ್ರಾವಣಗಳನ್ನು ಬಳಸಿ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಬೇಕು.
ರೋಗದಿಂದ ಯಾವುದಾದರೂ ಜಾನುವಾರುಗಳು ಮೃತಪಟ್ಟರೆ ಅಂತಹ ಕಳೇಬರಗಳನ್ನು ಸೋಂಕು ನಿವಾರಕ ಬಳಸಿ ಶುಚಿಗೊಳಿಸಿದ ನಂತರ ಕನಿಷ್ಠ ಆರು ಅಡಿಗಳ ಆಳದ ಗುಂಡಿಯನ್ನು ತೋಡಿ ಅದರಲ್ಲಿ ಹಾಕಬೇಕು.
• ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ರೋಗ ಹರಡುವ ಮುನ್ಸೂಚನೆ ಇರುವಂತ ಪ್ರದೇಶಗಳಲ್ಲಿ ಅಥವಾ ರೋಗ ಲಕ್ಷಣಗಳನ್ನು ತೋರಿಸುವ ಜಾನುವಾರುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ರೋಗನಿರೋಧಕ ಲಸಿಕೆಗಳನ್ನು ನಾಲ್ಕರಿಂದ ಆರು ತಿಂಗಳ ವಯಸ್ಸಿನ ಮೇಲ್ಪಟ್ಟ ಜಾನುವಾರುಗಳಲ್ಲಿ ಕೊಡಿಸಿ ಕೊಳ್ಳಬೇಕು
• ಜಾನುವಾರುಗಳನ್ನು ಸಾಕಷ್ಟು ಅನ್ಯ ಜಾನುವಾರುಗಳ ಸಂಪರ್ಕಕ್ಕೆ ಬರದಂತೆ ಮೇಯಲು ಬಿಡದೆ ಕೊಟ್ಟಿಗೆಯಲ್ಲಿ ಸಾಕಬೇಕು.
ಈ ರೋಗವು ಹಾಲಿನಿಂದ ಹರಡುವುದಿಲ್ಲ.
ಚರ್ಮಗಂಟು ರೋಗ ಕಾಣಿಸಿಕೊಂಡಿರುವ ಹಸುವಿನ ಹಾಲು ಕುಡಿದರೆ ಮನುಷ್ಯರಿಗೆ ಯಾವುದೇ ರೀತಿಯ ಖಾಯಿಲೆ ಬರುವುದಿಲ್ಲ ಈ ಕಾಯಿಲೆ ಮನುಷ್ಯರಿಗೆ ಹರಡುವುದಿಲ್ಲ ಹಾಗಾಗಿ ಈ ವಿಚಾರದಲ್ಲಿ ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ ಆದರೆ ಕುದಿಸಿ ಆರಿಸಿದ ಹಾಲನ್ನು ಬಳಕೆ ಮಾಡುವುದು ಉತ್ತಮ.

Leave a Reply

Your email address will not be published. Required fields are marked *