ಸುಳ್ಯ: ರಿಕ್ಷಾ ಚಾಲಕ ಸಂಘದ ನಾಯಕರಾಗಿ, ಕಾರ್ಮಿಕ ಸಂಘದ ನೇತಾರನಾಗಿ , ಧಾರ್ಮಿಕ ಉಪನ್ಯಾಸಕನಾಗಿ, ಯಕ್ಷಗಾನ ಕಲಾವಿದನಾಗಿ, ಸಂಘಟಕನಾಗಿ ಸುಮಾರು ನಾಲ್ಕು ದಶಕಗಳಿಗಿಂತಲೂ ಮಿಕ್ಕಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ‘ಗೋಪಾಲಕೃಷ್ಣ ಭಟ್’ ಇವರಿಗೆ ಸಾರ್ವಜನಿಕ ಅಭಿನಂದನೆ ಹಾಗೂ ಸನ್ಮಾನ ಸಮಾರಂಭ ಡಿ.11 ರಂದು ಸರಳಿಕುಂಜದ ಧರ್ಮಾರಣ್ಯದ ಗುರುಗಣಪತಿ ಸಭಾಭವನದಲ್ಲಿ ನಡೆಯಲಿದೆ ಎಂದು ಗೋಪಾಲಕೃಷ್ಣ ಭಟ್ ಸಾರ್ವಜನಿಕ ಅಭಿನಂದನಾ ಸಮಿತಿಯ ಅಧ್ಯಕ್ಷ ಅಶೋಕ ಪ್ರಭು ತಿಳಿಸಿದ್ದಾರೆ. ಅವರು ಧರ್ಮಾರಣ್ಯವನ್ನು ಒಂದು ಪಾವನ ಕ್ಷೇತ್ರವನ್ನಾಗಿ ರೂಪಿಸುವಲ್ಲಿ ಅವರ ಶ್ರಮ ಮಹತ್ವದ್ದು. ಅವರು ಸಮಾಜಕ್ಕೆ ನೀಡಿದ ಸೇವೆ ದೊಡ್ಡದು. ಈಗ ಇವರಿಗೆ ಎಪ್ಪತ್ತೈದನೆಯ ಹುಟ್ಟು ಹಬ್ಬದ ಸಂಭ್ರಮ, ಜೊತೆಗೆ ವೈವಾಹಿಕ ಜೀವನದ ಐವತ್ತು ಸಂವತ್ಸರಗಳನ್ನು ಕೂಡಾ ಪೂರೈಸಿದ್ದಾರೆ. ಈ ಇಳಿ ವಯಸ್ಸಿನಲ್ಲಿಯೂ ಯುವಕರೂ ನಾಚುವಂತಹಾ ಹೋರಾಟದ ಕಿಚ್ಚನ್ನು ಉಳಿಸಿಕೊಂಡವರಿವರು ರಿಕ್ಷಾ ಚಾಲಕರ ಶ್ರೇಯಸ್ಸಿಗಾಗಿ ಹಗಲಿರುಳೂ ಚಿಂತಿಸುತ್ತಾ ಸದಾಕಾಲ ಅವರ ಸಹಾಯಕ್ಕೆ ಧುಮುಕುತ್ತಿರುವವರು . ಈ ಶುಭ ಸಂದರ್ಭದಲ್ಲಿ ಗೋಪಾಲಕೃಷ್ಣ ಭಟ್ಟರನ್ನು ಸಾರ್ವಜನಿಕವಾಗಿ ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಡಿ.11 ರಂದು ಬೆಳಗ್ಗೆ 9 ಗಂಟೆಗೆ ಗೋಪಾಲಕೃಷ್ಣ ಭಟ್ ದಂಪತಿಗಳನ್ನು ಸುಳ್ಯ ಜ್ಯೋತಿ ವೃತ್ತದಿಂದ ಧರ್ಮಾರಣ್ಯಕ್ಕೆ ವೈಭವದ ಮೆರವಣಿಗೆಯಲ್ಲಿ ಕರೆತರಲಾಗುವುದು. ಪೂ.10 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಪದ್ಮಶ್ರೀ ಗಿರೀಶ್ ಭಾರದ್ವಾಜ್ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ನವೀನಚಂದ್ರ ಜೋಗಿಯವರು ಆಗಮಿಸಲಿದ್ದಾರೆ. ಹಾಗೂ ಬೆಳ್ತಂಗಡಿ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೂಂತಾರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಅಭಿನಂದನಾ ಗ್ರಂಥ ‘ಅಂತರಿಕ್ಷ’ದ ಬಿಡುಗಡೆಯನ್ನು ಉದ್ಯಮಿ ಕೃಷ್ಣ ಕಾಮತ್ ನೆರವೇರಿಸಲಿದ್ದಾರೆ. ಗೋಪಾಲಕೃಷ್ಣ ಭಟ್ ಸಾರ್ವಜನಿಕ ಅಭಿನಂದನಾ ಸಮಿತಿಯ ಅಧ್ಯಕ್ಷ ಅಶೋಕ ಪ್ರಭು, ಬಿ.ಎಂ.ಎಸ್.ಅಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಚ ರಾಧಾಕೃಷ್ಣ ಬೈತ್ತಡ್ಕ ಉಪಸ್ಥಿತರಿರುವರು. ಮಧ್ಯಾಹ್ನ ಭೋಜನದ ನಂತರ ಗಂಟೆ 2.30 ರಿಂದ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಿಂದ ‘ಯಕ್ಷ ಸಂವಾದ’ ಕಾರ್ಯಕ್ರಮ ನಡೆಯಲಿದೆ ಎಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ ಪ್ರಭು ವಿವರಿಸಿದರು.