ಸಕಲೇಶಪುರ: 2026 -27ಕ್ಕೆ ಎತ್ತಿನಹೊಳೆ ಯೋಜನೆಯ ಸಂಪೂರ್ಣ ಕಾಮಗಾರಿ ಮುಗಿಸಿ 7 ಜಿಲ್ಲೆಗಳ ಲಕ್ಷಾಂತರ ಮನೆಗಳಿಗೆ ಕುಡಿಯುವ ನೀರು ಒದಗಿಸಲು ನಮ್ಮ ಸರ್ಕಾರ ಶತಸಿದ್ಧವಾಗಿದೆ. ಅದನ್ನೂ ನಾನೇ ಉದ್ಘಾಟಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಜಲಸಂಪನ್ಮೂಲ ಇಲಾಖೆ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮ ವತಿಯಿಂದ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ಶಕ್ರವಾರ ಆಯೋಜಿಸಲಾಗಿದ್ದ ‘ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಹಂತ-1ರ ಕಾಮಗಾರಿಗಳ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆಗೆ ಭೂಮಿಪೂಜೆಯನ್ನು 2014ರಲ್ಲಿ ಚಿಕ್ಕಬಳ್ಳಾಪುರದಲ್ಲಿ ನೇರವೇರಿಸಿದವನು ನಾನೇ. ಮೊದಲ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿದ್ದೇನೆ. ಎರಡನೇ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿ ಯೋಜನೆಯನ್ನು ಪೂರ್ಣ ಮಾಡಿ ಕುಡಿಯುವ ನೀರನ್ನು ಕೊಟ್ಟೇ ಕೊಡ್ತೀನಿ. ಕೆರೆಗಳನ್ನು ತುಂಬಿಸಿಯೇ ತುಂಬಿಸ್ತೇನೆ. ಇದು ಶತಸಿದ್ಧ ಎಂದರು.
ಎತ್ತಿನಹೊಳೆಯ ತಗ್ಗು ಪ್ರದೇಶದಲ್ಲಿರುವ ಹಳ್ಳಗಳಲ್ಲಿ ಎಷ್ಟು ನೀರು ಸಿಗಲಿದೆ ಬಗ್ಗೆ ಈಗಾಗಲೇ ಸಮೀಕ್ಷೆ ನಡೆಸಲಾಗುತ್ತಿದೆ. ಕೊರತೆ ಇರುವ ನೀರನ್ನು ಹಳ್ಳಗಳಿಂದ ಎತ್ತಿ ಸಂಗ್ರಹಿಸುವ ಕುರಿತು ಈಗಾಗಲೇ ಅಧಿಕಾರಿಗಳು ಸರ್ವೇ ನಡೆಸುತ್ತಿದ್ದಾರೆ. 2026 -27ಕ್ಕೆ ಎತ್ತಿನಹೊಳೆ ಯೋಜನೆಯ ಸಂಪೂರ್ಣ ಕಾಮಗಾರಿ ಮುಗಿಸಿ 7 ಜಿಲ್ಲೆಗಳ ಲಕ್ಷಾಂತರ ಮನೆಗಳಿಗೆ ಕುಡಿಯುವ ನೀರು ಒದಗಿಸಲು ನಮ್ಮ ಸರ್ಕಾರ ಶತಸಿದ್ಧವಾಗಿದೆ. ಅದನ್ನೂ ನಾನೇ ಉದ್ಘಾಟಿಸುತ್ತೇನೆ ಎಂದು ಸಿಎಂ ಭರವಸೆ ನೀಡಿದರು.
ಎತ್ತಿನಹೊಳೆ ಯೋಜನೆಯಡಿ ಒಟ್ಟು 24 ಟಿಎಂಸಿ ಪೈಕಿ 19 ಟಿಎಂಸಿ ನೀರು ಲಭ್ಯವಾಗುತ್ತಿದ್ದು, ಉಳಿದ ಐದಾರು ಟಿಎಂಸಿ ನೀರನ್ನು ತಗ್ಗುಪ್ರದೇಶದ ಹಳ್ಳಗಳಿಂದ ಸಂಗ್ರಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದು ಎರಡು ಹಂತದ ಯೋಜನೆ. 2ನೇ ಹಂತದ ಕಾಮಗಾರಿ 2026-27ಕ್ಕೆ ಮುಕ್ತಾಯಗೊಂಡು ಇಡೀ ಯೋಜನೆ ಯಶಸ್ವಿಯಾಗಿ ಜಾರಿಯಾಗಲಿದೆ. ಯೋಜನೆ ಬಗ್ಗೆ ಅನುಮಾನ ಇಟ್ಟುಕೊಳ್ಳಬಾರದು. ವಿರೋಧ ಪಕ್ಷಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಈ ಬಗ್ಗೆ ಜನರು ಕಿವಿಗೊಡಬೇಡಿ ಎಂದು ಸಿಎಂ ಮನವಿ ಮಾಡಿದರು.
ಕುಡಿಯುವ ನೀರಿನ ವಿಚಾರದಲ್ಲಿ ರೈತರಿಗೆ ಅರಣ್ಯಾಧಿಕಾರಿಗಳು ಯಾವುದೇ ತೊಂದರೆ ಕೊಡಬಾರದು ಎಂಬ ಸೂಚನೆಯನ್ನು ಇದೇ ವೇಳೆ ನೀಡುತ್ತಿದ್ದೇನೆ ಎಂದು ಎಚ್ಚರಿಕೆ ನೀಡಿದರು.