ಇಂಗ್ಲೆಂಡ್ ತಂಡದ ಮಾಜಿ ಆಲ್‌ರೌಂಡರ್ ಮತ್ತು ನಾಯಕ ಆಂಡ್ರ್ಯೂ ಫ್ಲಿಂಟಾಫ್ ಬಿಬಿಸಿ ಶೋ ಟಾಪ್ ಗೇರ್‌ನ ಸಂಚಿಕೆಯ ಚಿತ್ರೀಕರಣದ ವೇಳೆ ಕಾರು ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಸರ್ರೆಯ ಡನ್ಸ್‌ಫೋಲ್ಡ್ ಪಾರ್ಕ್ ಏರೋಡ್ರೋಮ್‌ನಲ್ಲಿ ಸೋಮವಾರ ಕಾರು ಅಪಘಾತ ಸಂಭವಿಸಿದೆ. ಆದರೆ, ಘಟನೆಯ ನಂತರ ಆಂಗ್ಲ ಮಾಧ್ಯಮಗಳು ವರದಿ ಮಾಡಿದಂತೆ ಫ್ಲಿಂಟಾಫ್ ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದೆ.

ಈ ಮಾಜಿ ಇಂಗ್ಲಿಷ್ ಕ್ರಿಕೆಟಿಗ 2010ರಲ್ಲಿ ಆಟದಿಂದ ನಿವೃತ್ತರಾದರು ಮತ್ತು ಅಂದಿನಿಂದ ದೂರದರ್ಶನ ರಿಯಾಲಿಟಿ ಶೋಗಳಲ್ಲಿ ನಿಯಮಿತವಾಗಿದ್ದಾರೆ. ಅವರು 2019ರಲ್ಲಿ ಪ್ರಖ್ಯಾತ ಬಿಬಿಸಿ ಕ್ರೀಡಾ ಕಾರ್ಯಕ್ರಮ ಟಾಪ್ ಗೇರ್ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಇದೇ ರೀತಿ ಕಾರ್ಯಕ್ರಮದ ಚಿತ್ರೀಕರಣದ ವೇಳೆ ಫ್ಲಿಂಟಾಫ್ ಟೆಸ್ಟ್ ಟ್ರ್ಯಾಕ್‌ನಲ್ಲಿ ಅಪಘಾತಕ್ಕೆ ಒಳಗಾಗಿದ್ದಾರೆ. ತಕ್ಷಣ ಸಿಬ್ಬಂದಿಗಳು ಮತ್ತು ವೈದ್ಯರು ಅವರನ್ನು ಆಸ್ಪತ್ರೆಗೆ ದಾಖಲಸಿಇದ್ದು, ಚಿಕಿತ್ಸೆ ನಡೆಯುತ್ತಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಬಿಬಿಸಿ ಸಂಸ್ಥೆ, ‘ಇಂದು ಬೆಳಿಗ್ಗೆ ಟಾಪ್ ಗೇರ್ ಪರೀಕ್ಷಾ ಟ್ರ್ಯಾಕ್‌ನಲ್ಲಿ ಫ್ಲಿಂಟಾಫ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಸಿಬ್ಬಂದಿಗಳು ಹಾಗೂ ವೈದ್ಯರು ತಕ್ಷಣ ಘಟನಾ ಸ್ಥಳಕ್ಕೆ ಹಾಜರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಮತ್ತು ಸರಿಯಾದ ಸಮಯದಲ್ಲಿ ಅವರಿಗೆ ಚಿಕಿತ್ಸೆಯನ್ನೂ ನೀಡಲಾಗಿದೆ. ಈ ಕುರಿತ ಹೆಚ್ಚಿನ ವಿವರಗಳನ್ನು ನಾವು ಖಚಿತಪಡಿಸುತ್ತೇವೆ‘ ಎಂದು ತಿಳಿಸಿದೆ. ಚಿತ್ರೀಕರಣಕ್ಕಾಗಿ ಎಲ್ಲಾ ಸಾಮಾನ್ಯ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳು ಸಹ ನೋಡಿಕೊಳ್ಳಲಾಗಿತ್ತು. ಸ್ವಲ್ಪ ಸಮಯದ ನಂತರ ಏರ್ ಆ್ಯಂಬುಲೆನ್ಸ್ ಮೂಲಕ ಫ್ರೆಡ್ಡಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯಕ್ಕೆ ಚಿತ್ರೀಕರಣವನ್ನು ಮುಂದೂಡಲಾಗಿದೆ ಮತ್ತು ಫ್ರೆಡ್ಡಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಇಂಗ್ಲೆಂಡ್ ಮಾಧ್ಯಮಗಳು ವರದಿ ಮಾಡಿದೆ. ಇದಕ್ಕೂ ಮುನ್ನ 2019 ರಲ್ಲಿ ಪ್ರಸಿದ್ಧ ದೂರದರ್ಶನ ಕಾರ್ಯಕ್ರಮದ ಮತ್ತೊಂದು ಸಂಚಿಕೆಯ ಚಿತ್ರೀಕರಣದ ಸಮಯದಲ್ಲಿ ಫ್ಲಿಂಟಾಫ್ ಅಪಘಾತಕ್ಕೆ ಒಳಗಾಗಿದ್ದರು. ಆಗಲೂ ಸಹ ಯಾವುದೇ ಹೆಚ್ಚಿನ ತೊಂದರೆ ಆಗದೆಯೇ ವಾಪಸ್ಸಾಗಿದ್ದರು.