ದೋಹಾ(ಕತಾರ್): ಜಗತ್ತಿನ ಫುಟ್ಬಾಲ್ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಅವರ ಮ್ಯಾಜಿಕ್ ಮತ್ತು ಜೂಲಿಯನ್ ಅಲ್ವಾರೆಜ್ ಅವರ ಡಬಲ್ ಗೋಲ್ ಗಳೊಂದಿಗೆ ಕ್ರೊಯೆಷಿಯಾ ವಿರುದ್ಧ ಅರ್ಜೆಂಟೀನ ರೋಚಕ ಜಯಗಳಿಸಿದೆ. ಮಂಗಳವಾರ 12:30am ಕ್ಕೆ ನಡೆದ ಸೆಮಿಫೈನಲ್‌ನಲ್ಲಿ ಕ್ರೊಯೆಷಿಯಾವನ್ನು 3-0 ಅಂತರದಿಂದ ಸೋಲಿಸಿತು. ಬ್ರೆಜಿಲ್‌ನಂತಹ ಅಗ್ರ ತಂಡಗಳನ್ನು ಸೋಲಿಸಿ ಸೆಮಿಸ್ ಪ್ರವೇಶಿಸಿದ್ದ ಕ್ರೊಯೆಷಿಯಾಗೆ ಅರ್ಜೆಂಟೀನಾ ವಿರುದ್ಧ ಆ ವೇಗವನ್ನು ಮುಂದುವರಿಸಲು ಸಾಧ್ಯವಾಗಲೇ ಇಲ್ಲ.
ಅರ್ಜೆಂಟೀನಾ ನಾಯಕ ಮೆಸ್ಸಿ 34ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್ ಅನ್ನು ಗೋಲಾಗಿ ಪರಿವರ್ತಿಸುವ ಮೂಲಕ ಪ್ರಥಮ ಲೀಡ್ ಪಡೆದುಕೊಂಡರು. ಇದು ಈ ವಿಶ್ವಕಪ್‌ನಲ್ಲಿ ಮೆಸ್ಸಿ ಗಳಿಸಿದ ಐದನೇ ಗೋಲಾಗಿತ್ತು. ಇದಾದ ಬಳಿಕ 39ನೇ ನಿಮಿಷದಲ್ಲಿ ಜೂಲಿಯನ್ ಅಲ್ವಾರೆಜ್ ಗೋಲು ಬಾರಿಸಿ ಅರ್ಜೆಂಟೀನಾಗೆ 2-0 ಮುನ್ನಡೆ ತಂದು ಕೊಟ್ಟರು. ದ್ವಿತೀಯಾರ್ಧದಲ್ಲಿ ಮೆಸ್ಸಿಯ ಮ್ಯಾಜಿಕಲ್ ಅಸಿಸ್ಟ್ ನಿಂದ ಅಲ್ವಾರೆಜ್ ಕ್ರೊಯೆಷಿಯಾದ ರಕ್ಷಣಾ ಕೋಟೆಯನ್ನು ಭೇದಿಸಿ ಗೋಲು ಗಳಿಸಿ ಅರ್ಜೆಂಟೀನಾಗೆ ಜಯ ತಂದುಕೊಟ್ಟರು. ಅರ್ಜೆಂಟೀನಾಗೆ ಕ್ರೊಯೆಷಿಯಾ ಕಠಿಣ ಪೈಪೋಟಿ ನೀಡಿದರೂ ಅದೃಷ್ಟ ಕೈ ಹಿಡಿಯಲಿಲ್ಲ. ಈ ಪಂದ್ಯದಲ್ಲಿ ಕ್ರೊಯೆಷಿಯಾದ ಆಟಗಾರ ಲೂಕಾ ಮಾಡ್ರಿಕ್ ಹಲವು ಬಾರಿ ಗೋಲು ಗಳಿಸಲು ವಿಫಲಪ್ರಯತ್ನ ನಡೆಸಿದರು. ಆದರೆ ಅವಕಾಶಗಳು ಕೈ ತಪ್ಪಿ ಸೋಲು ಅನಿವಾರ್ಯವಾಯಿತು.

ಒಟ್ಟಾಗಿ ಅರ್ಜೆಂಟೀನ ಈ ಮೂಲಕ ಆರನೇ ಬಾರಿ ಫೈನಲ್ ಪ್ರವೇಶಿಸಿತು. ಇದರಲ್ಲಿ ಮೂರು ಬಾರಿ ವಿಜೇತರಾಗಿದ್ದು, ಎರಡು ಬಾರಿ ರನ್ನರ್ ಅಪ್ ಆಗಿದ್ದಾರೆ. ಮತ್ತೊಂದೆಡೆ ಕಳೆದ ವಿಶ್ವಕಪ್ ನಲ್ಲಿ ರನ್ನರ್ ಅಪ್ ಆಗಿದ್ದ ಕ್ರೊಯೆಷಿಯಾ ಈ ಬಾರಿ ಸೆಮಿಫೈನಲ್ ನಲ್ಲಿ ಸೋಲು ಕಾಣುವ ಮೂಲಕ ತನ್ನ ಅಭಿಯಾನವನ್ನು ಮುಕ್ತಾಯಗೊಳಿಸಿದೆ. 2018 ರ ಜೂನ್ 21 ರಂದು ನಡೆದ ಕ್ರೊಯೇಷಿಯಾ ಹಾಗೂ ಅರ್ಜೆಂಟೀನಾ ಪಂದ್ಯದಲ್ಲಿ ಅರ್ಜೆಂಟೀನ ತಂಡವನ್ನು 3-0 ಕ್ರೊಯೇಷಿಯಾ ಮಣಿಸಿತ್ತು, ಇದಕ್ಕೆ ಪ್ರತ್ಯುತ್ತರವಾಗಿ ಇಂದು 3-0 ರಲ್ಲಿ ಅರ್ಜೆಂಟೀನ ತಂಡ ಕ್ರೊಯೇಷಿಯಾ ತಂಡವನ್ನು ಮಣಿಸಿದೆ.