ಕೇರಳ ರಾಜ್ಯ ಅಮೆಚೂರು ಕಬಡ್ಡಿ ತಂಡದ ಮಾಜಿ ನಾಯಕ ಹಾಗೂ ರಾಷ್ಟ್ರೀಯ ಕಬಡ್ಡಿ ತಂಡದ ಮಾಜಿ ಆಟಗಾರ, ಕಬಡ್ಡಿ ದಂತಕಥೆ ಮಂಜೇಶ್ವರ ಮೂಲದ ಸುಧೀರ್ ಕುಮಾರ್ (53) ಡಿ.15ರಂದು ಸ್ವಗೃಹದಲ್ಲಿ ನಿಧನಹೊಂದಿದ್ದಾರೆ. ಅತೀವ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಇವರು , ಗ್ಯಾಂಗ್ರೀನ್ ಗೆ ಒಳಗಾಗಿ ಹಲವು ತಿಂಗಳಿನಿಂದ ಅಸೌಖ್ಯಕ್ಕೊಳಗಾಗಿದ್ದರು. ಕೇರಳದಲ್ಲಿ ಹಿಂದೆ ಇದ್ದಂತಹ ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು

ಅನಂತರ ಬೇರೆ ಉದ್ಯಮ ನಡೆಸುತ್ತಿದ್ದರು. ಕಬ್ಬಡ್ಡಿ ಕೇರಳ ರಾಜ್ಯ ತಂಡದ ನಾಯಕರಾಗಿ ಹಲವು ವರ್ಷಗಳ ಕಾಲ ಕೇರಳ ರಾಜ್ಯದ ಕಬಡ್ಡಿ ತಂಡಕ್ಕೆ ನೇತೃತ್ವ ವಹಿಸಿ ಹಲವು ಗೆಲುವನ್ನು ತಂದುಕೊಟ್ಟವರು ಇವರು. ರಾಷ್ಟ್ರಮಟ್ಟದ ತಂಡದಲ್ಲಿ ಉತ್ತಮ ಆಟಗಾರರಾಗಿ ಮಿಂಚಿದ್ದ ಇವರು , ಕಾಸರಗೋಡು ಜಿಲ್ಲೆಯ ಹಲವು ಯುವ ಆಟಗಾರರಿಗೆ, ರಾಜ್ಯ ತಂಡದಲ್ಲಿ ಪ್ರತಿನಿಧಿಸಲು ಅವಕಾಶವನ್ನು ಕಲ್ಪಿಸಿದ್ದ ವ್ಯಕ್ತಿಯಾಗಿದ್ದವರು. ಮೃತರಿಗೆ ಉಮಾಮಹೇಶ್ವರಿ ಕಬ್ಬಡ್ಡಿ ಅಮೆಚೂರು ಅಸೋಸಿಯೇಷನ್ ಹಾಗೂ ಅನೇಕ ಕಬಡ್ಡಿ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದೆ.