Advertisement

ದೆಹಲಿ: ದೆಹಲಿಯ  ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು 5 ನೇ ತರಗತಿ ವಿದ್ಯಾರ್ಥಿಯನ್ನು ಮೊದಲ ಮಹಡಿಯಿಂದ ಎಸೆದಿರುವ ಘಟನೆ ಶುಕ್ರವಾರ ವರದಿಯಾಗಿದೆ. ವಂದನಾ ಎಂಬ ಮಗು ಆಸ್ಪತ್ರೆಯಲ್ಲಿದ್ದು ಈಗ ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಗೀತಾ ದೇಶ್ವಾಲ್ ಎಂಬ ಶಿಕ್ಷಕಿಯನ್ನು ಬಂಧಿಸಲಾಗಿದೆ. ದೆಹಲಿ ನಗರ ನಿಗಮ್ ಬಾಲಿಕಾ ವಿದ್ಯಾಲಯದಲ್ಲಿ ಬೆಳಗ್ಗೆ 11.15ರ ಸುಮಾರಿಗೆ ಈ ಘಟನೆ ನಡೆದಿದೆ.ಶಿಕ್ಷಕಿ ಗೀತಾ ಮೊದಲ ಮಹಡಿಯ ತರಗತಿಯಿಂದ ಹೊರಗೆ ಎಸೆಯುವ ಮುನ್ನ ವಂದನಾಳ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಿದ್ದಾಳೆ.

ಮತ್ತೊಬ್ಬ ಶಿಕ್ಷಕಿ ರಿಯಾ ಮಧ್ಯಪ್ರವೇಶಿಸಿ ತನ್ನ ಸಹೋದ್ಯೋಗಿ ಮಗುವನ್ನು ಥಳಿಸದಂತೆ ತಡೆಯಲು ಯತ್ನಿಸಿದ್ದಾಳೆ ಎನ್ನಲಾಗಿದೆ. ಬಾಲಕಿ ಮೊದಲ ಮಹಡಿಯಿಂದ ಬಿದ್ದಾಗ ಅಲ್ಲಿ ಜನ ಸೇರಿದ್ದು ಅವರು ಪೊಲೀಸರಿಗೆ ಕರೆ ಮಾಡಿದರು. ಅವರು ತೀವ್ರವಾಗಿ ಗಾಯಗೊಂಡ ಮಗುವನ್ನು ಬಾರಾ ಹಿಂದೂ ರಾವ್ ಆಸ್ಪತ್ರೆಗೆ ಕರೆದೊಯ್ದರು. ಸಿಟಿ ಸ್ಕ್ಯಾನ್ ಸೇರಿದಂತೆ ಅಗತ್ಯ ಪರೀಕ್ಷೆ ನಡೆಸಲಾಗಿದೆ. ಮಗು ಸುರಕ್ಷಿತವಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಬಾಲಕಿಯ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ನಾಗರಿಕ ಸಂಸ್ಥೆ ತಿಳಿಸಿದೆ. ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ. ಇಲಾಖೆಯು ಹೆಚ್ಚಿನ ತನಿಖೆ ನಡೆಸುತ್ತಿದೆ ಎಂದು ದೆಹಲಿಯ ಹಿರಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ . ಶಿಕ್ಷಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಂಸಿಡಿ ಕೂಡ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಅಮಾನತುಗೊಳಿಸಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಯ ಹೇಳಿಕೆಯ ಮೇರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ರ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ (ಸೆಂಟ್ರಲ್) ಶ್ವೇತಾ ಚೌಹಾಣ್ ಹೇಳಿದ್ದಾರೆ. ನನ್ನ ಮಗುವನ್ನು ಎಸೆಯಲಾಯಿತು. ಶಿಕ್ಷಕರು ನನ್ನ ಮಗುವಿನ ತಲೆಗೆ ಕತ್ತರಿಯಿಂದ ಹೊಡೆದು ರಕ್ತಬರಿಸಿದ್ದರು. ಅದನ್ನು ನೋಡಿದಾಗ ಸರಿಯಾಗಿ ನಿಲ್ಲುವ ಸ್ಥಿತಿಯಲ್ಲಿ ಇರಲಿಲ್ಲ. ಮಗು ಈಗ ಸುಧಾರಿಸಿಕೊಳ್ಳುತ್ತಿದ್ದಾಳೆ ಎಂದು ಮಗುವಿನ ಅಪ್ಪ ಹೇಳಿರುವುದಾಗಿ ಎಎನ್ಐ ಟ್ವೀಟ್ ಮಾಡಿದೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ