ಸುಳ್ಯ: ಸುಳ್ಯದ ಬಿ.ಸಿ.ಎಂ ಹಾಸ್ಟೆಲ್’ನಲ್ಲಿ ವಿದ್ಯಾರ್ಥಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸುಳ್ಯದ ಶಾರದಾ ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಬೆಂಗಳೂರು ಮೂಲದ ವಿದ್ಯಾರ್ಥಿನಿ ಸೋನಿಯಾ (೧೮) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಸೋನಿಯಾ ಈ ದಿನ ಕಾಲೇಜಿಗೆ ಗೈರು ಹಾಜರಾಗಿ, ಹಾಸ್ಟೇಲ್’ನಲ್ಲಿ ಉಳಿದುಕೊಂಡಿದ್ದಳು. ಮಧ್ಯಾಹ್ನ ಊಟದ ಸಮಯಕ್ಕೆ ಆಕೆ ರೂಮಿನಲ್ಲಿದ್ದ ಇನ್ನೊಬ್ಬಳು ಊಟದ ತಟ್ಟೆ ತರಲೆಂದು ರೂಮ್ ಗೆ ಹೋದಾಗ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿತ್ತು, ಬಾಗಿಲು ತಟ್ಟಿದ್ದರೂ ಬಾಗಿಲು ತೆರೆದಿರಲಿಲ್ಲ, ಸೋನಿಯ ಮಲಗಿರಬಹುದು ಎಂದು ಭಾವಿಸಿ ಗೆಳತಿಯ ತಟ್ಟೆಯಲ್ಲಿ ಊಟ ಮುಗಿಸಿ ಮತ್ತೆ ರೂಮಿಗೆ ಬಂದಾಗಲೂ ಮೊದಲಿನ ರೀತಿ ಬಾಗಿಲು ತೆರೆಯದೇ ಇದ್ದಾಗ, ಸಂಶಯಗೊಂಡ ವಿದ್ಯಾರ್ಥಿನಿ ವಾರ್ಡನ್ ಗೆ ಈ ಮಾಹಿತಿ ತಿಳಿಸಿದ್ದಾಳೆ, ಸಿಬ್ಬಂದಿಗಳು ಬಂದು ಬಾಗಿಲು ಒಡೆದು ನೋಡಿದಾಗ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಪೋಲಿಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಎಸ್ ಐ ದಿಲೀಪ್ ಕುಮಾರ್, ಮೊದಲಾದವರು ಆಗಮಿಸಿದ್ದು ವಿದ್ಯಾರ್ಥಿನಿ ಮೃತದೇಹವನ್ನು ಮಹಜರಿಗೆ ಸಾಗಿಸಲಾಯಿತು. ವಿದ್ಯಾರ್ಥಿನಿ ಯಾಕೆ ಆತ್ಮಹತ್ಯೆ ಮಾಡಿದ್ದಳೆಂದು ಇನ್ನಷ್ಟೇ ತಿಳಿದು ಬರಬೇಕಾಗಿದೆ.
