ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಬಹುಭಾಷ ‘ಕಾಂತಾರ’ ಸಿನಿಮಾ ಸಾಕಷ್ಟು ದಾಖಲೆಗಳನ್ನು ಈಗಾಗಲೇ ಮಾಡಿದೆ. ₹16 ಕೋಟಿ ಬಜೆಟ್‌ನಲ್ಲಿ ತಯಾರಾದ ಸಿನಿಮಾ ಇದುವರೆಗೂ ₹500 ಕೋಟಿ ಲಾಭ ಮಾಡಿದೆ. ಕೆಲ ಭಾಗಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಕರಾವಳಿಯ ಆಚರಣೆ, ಪಂಜುರ್ಲಿ ದೈವದ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಇದೀಗ ಪಂಜುರ್ಲಿ ದೈವ ಹಾಗೂ ಕರಾವಳಿಯ ಸಂಸ್ಕೃತಿ ಬಗ್ಗೆ ಇಡೀ ದೇಶಕ್ಕೆ ತಿಳಿದಿದೆ. ಸಿನಿಮಾ ನೋಡಿ ಕನ್ನಡ ಸ್ಟಾರ್‌ಗಳು ಮಾತ್ರವಲ್ಲದೆ, ರಜನಿಕಾಂತ್, ಕಮಲ್ ಹಾಸನ್, ಪ್ರಭಾಸ್, ರಾಣಾ ದಗ್ಗುಬಾಟಿ, ರಾಮ್ ಗೋಪಾಲ್ ವರ್ಮಾ, ಅನುಷ್ಕಾ ಶೆಟ್ಟಿ, ಹೃತಿಕ್ ರೋಷನ್, ವಿವೇಕ್ ರಂಜನ್ ಅಗ್ನಿಹೋತ್ರಿ, ಕಂಗನಾ ರಣಾವತ್, ಶಿಲ್ಪಾಶೆಟ್ಟಿ ಹಾಗೂ ಇನ್ನಿತರ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ‘ಕಾಂತಾರ’ ಸಕ್ಸಸ್ ಕಾಣುತ್ತಿದ್ದಂತೆ ಕೆಲವರು ದೈವ ಕೂಗುವುದನ್ನು ಅನುಕರಣೆ ಮಾಡುತ್ತಾ ಆ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ”ದೈವದ ಅನುಕರಣೆ ಮಾಡುವುದು ಒಳ್ಳೆಯದಲ್ಲಿ, ದಯವಿಟ್ಟು ಯಾರೂ ಹೀಗೆ ಮಾಡಬೇಡಿ” ಎಂದು ರಿಷಬ್ ಶೆಟ್ಟಿ ಮನವಿ ಮಾಡಿದ್ದರು. ಜೊತೆಗೆ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ಇನ್ನಿತರ ಭಾಗಗಳಲ್ಲಿ ದೈವದ ಹೆಸರು ಹೇಳಿಕೊಂಡು ಕೆಲವರು ಹಣ ಕೀಳುವ ದಂಧೆ ಆರಂಭಿಸಿದ್ದರು.
ಇದೀಗ ಸಾಂತಾಕ್ಲಾಸ್ ವೇಷ ಧರಿಸಿದ ವ್ಯಕ್ತಿಯೊಬ್ಬರು ದೈವ ಕೂಗುವ ಅನುಕರಣೆ ಮಾಡಿ ದೈವಕ್ಕೆ ಅಪಮಾನ ಮಾಡಿರುವ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಾಂತಾಕ್ಲಾಸ್ ವೇಷ ಧರಿಸಿರುವ ವ್ಯಕ್ತಿಯೊಬ್ಬರು ‘ಕಾಂತಾರ’ ಚಿತ್ರದ ಕ್ಲೈಮಾಕ್ಸ್ ದೃಶ್ಯವನ್ನು ಅನುಕರಣೆ ಮಾಡಿದ್ದಾರೆ. ದೈವ ಕೂಗುವಂತೆ ಕೂಗುವುದು, ಚಿತ್ರದ ಕ್ಲೈಮಾಕ್ಸ್‌ನಲ್ಲಿ ಪಂಜುರ್ಲಿ ದೈವ, ಎಲ್ಲರ ಕೈ ಹಿಡಿದುಕೊಳ್ಳುವುದು, ನಂತರ ಬೆಂಕಿ ಪಂಜುಗಳನ್ನು ಹಿಡಿದು ಕಾಡಿನ ಒಳಗೆ ಓಡಿಹೋಗುವ ದೃಶ್ಯವನ್ನು ಈ ವ್ಯಕ್ತಿ ಅನುಕರಣೆ ಮಾಡಿದ್ದಾರೆ. ಆ ವ್ಯಕ್ತಿ ಹೀಗೆ ಮಾಡುವಾಗ ಸಮೀಪದಲ್ಲೇ ಇರುವ ಕೆಲವರು ಜೋರಾಗಿ ನಗುತ್ತಿದ್ದಾರೆ. ಈ ವಿಡಿಯೋ ನೋಡಿದರೆ ಪಂಜುರ್ಲಿ ದೈವವನ್ನು ಅಪಮಾನ ಮಾಡುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ನೆಟಿಜನ್ಸ್ ಆ ವ್ಯಕ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ಧಾರೆ. ಆ ವ್ಯಕ್ತಿ ಯಾರೆಂದು ಗುರುತಿಸಿ, ಆತನಿಗೆ ಬುದ್ಧಿ ಹೇಳುವಂತೆ ಆಗ್ರಹಿಸುತ್ತಿದ್ದಾರೆ.