ನವದೆಹಲಿ: ಇಲ್ಲಿನ ಕಿದ್ವಾಯಿ ನಗರ ಪ್ರದೇಶದ ನವದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಡಿಎಂಸಿ) ಶಾಲೆಯಲ್ಲಿ ವಿದ್ಯಾರ್ಥಿಗಳ ಗುಂಪೊಂದು 8 ವರ್ಷದ ಬಾಲಕನ ಖಾಸಗಿ ಅಂಗಕ್ಕೆ ನೈಲಾನ್ ದಾರ ಕಟ್ಟಿ ಚಿತ್ರಹಿಂಸೆ ನೀಡಿರುವ ಘೋರ ಕೃತ್ಯಬೆಳಕಿಗೆ ಬಂದಿದೆ. ಕಳೆದ ಬುಧವಾರ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಆ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಗಾದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಆ 8 ವರ್ಷದ ಬಾಲಕ ಕಿದ್ವಾಯಿ ನಗರದ ಅಟಲ್ ಅದ್ರಾಶ್ ಶಾಲೆಯ ವಿದ್ಯಾರ್ಥಿಯಾಗಿದ್ದು. ಆತನ ಗುಪ್ತಾಂಗಕ್ಕೆ ವಿದ್ಯಾರ್ಥಿಗಳು ನೈಲಾನ್ ದಾರವನ್ನು ಕಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಡಿಸೆಂಬರ್ 28ರಂದು ಮನೆಯಲ್ಲಿ ಸ್ನಾನಕ್ಕೆ ಹೋಗುತ್ತಿದ್ದ ಆತನನ್ನು ಪೋಷಕರು ಪರೀಕ್ಷಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಗುವಿನ ಗುಪ್ತಾಂಗಕ್ಕೆ ದಾರ ಕಟ್ಟಿದ್ದರಿಂದ ಆ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಿಂದ ಪಿಸಿಆರ್ ಕರೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ತನಿಖಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಬಾಲಕನ ಚಿಕಿತ್ಸೆ ಮತ್ತು ಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಸದ್ಯಕ್ಕೆ ಬಾಲಕನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಗುಂಪನ್ನು ಗುರುತಿಸಲು ಬಾಲಕನಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಪೊಲೀಸರು ವಿದ್ಯಾರ್ಥಿಗಳನ್ನು ಗುರುತಿಸಲು ಶಾಲೆಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
Advertisement