ಸುಳ್ಯ: ಕರಾವಳಿಯಲ್ಲಿ ಇತ್ತೀಚೆಗೆ ಹಿಂದೂ- ಮುಸ್ಲಿಂ ಕೋಮು ಸಂಘರ್ಷದ ಹೆಚ್ಚಾಗಿದೆ, ಇದರಲ್ಲೂ ಸುಳ್ಯ ಇತ್ತೀಚೆಗೆ ಹಲವು ಅಹಿತಕರ ಘಟನೆಗೆ ಸಾಕ್ಷಿಯಾಗಿದೆ, ಇದರ ನಡುವೆಯೂ ಎಲ್ಲದಕ್ಕೂ ಮಿಗಿಲಾದ ಸೌಹಾರ್ದತೆಯ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಸ್ಲಿಂ ವ್ಯಕ್ತಿಯೊಬ್ಬರು ಅಯ್ಯಪ್ಪ ಮಾಲಾಧಾರಿ ಪುಟ್ಟ ಬಾಲಕನ ಕೈ ಹಿಡಿದು ರಸ್ತೆ ದಾಟಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಮನುಷ್ಯತ್ವಕ್ಕಿಂತ ಮಿಗಿಲಾದ ಧರ್ಮವಿಲ್ಲ ಎಂಬುದನ್ನು ಸಾರಿ ಹೇಳುವಂತಿದೆ ಈ ಘಟನೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿ ಎಂಬಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಯ ಸಂದೇಶ ಸಾರಿದ ವಿಶೇಷ ಘಟನೆ ನಡೆದಿದೆ ಕೋಮು ಸೌಹಾರ್ದತೆಗೆ ಇದೊಂದು ದೊಡ್ಡ ಉದಾಹರಣೆಯು ಹೌದು. ಇಬ್ರಾಹಿಂ ಮೈಲಿಕಲ್ಲು ಅನ್ನುವ ಹಿರಿಯ ಮುಸ್ಲಿಂ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಎದುರಿಗೆ ಅಯ್ಯಪ್ಪ ಮಾಲಾಧಾರಿ ಬಾಲಕ ಎದುರಾಗಿದ್ದಾನೆ. ಆ ಪುಟ್ಟ ಬಾಲಕ ರಸ್ತೆ ದಾಟುವುದಕ್ಕೆ ಪ್ರಯತ್ನಿಸುತ್ತಿದ್ದಾಗ ಆತನ ಕೈ ಹಿಡಿದು ಇಬ್ರಾಹಿಂ ರಸ್ತೆ ದಾಟಿಸಿದ್ದಾರೆ. ಅಲ್ಲದೆ ಆತನನ್ನು ಹಣ್ಣಿನ ಅಂಗಡಿಗೆ ಕರೆದುಕೊಂಡು ಹೋಗಿ ಹಣ್ಣು- ಹಂಪಲು ನೀಡಿ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇಬ್ರಾಹಿಂ ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು ಹಲವು ಶೀರ್ಷಿಕೆಯ ಮೂಲಕ ಈ ಫೋಟೋ ಸಖತ್ ವೈರಲ್ ಆಗುತ್ತಿದೆ.
Advertisement
Advertisement