ಸುಳ್ಯ ನಗರವನ್ನೇ ಬೆಚ್ಚಿ ಬೀಳಿಸಿದ್ದ, ಮೊಗರ್ಪಣೆಯಲ್ಲಿ ರಾತ್ರಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೋಲಿಸರು ಮೂರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಸುಳ್ಯದ ಜಯನಗರ ನಿವಾಸಿ ಮಹಮ್ಮದ್ ಶಾಹಿ ಎಂಬವರು ಮೊಗರ್ಪಣೆ ವೆಂಕಟರಮಣ ಸೊಸೈಟಿಯ ಬಳಿ ತನ್ನ ಕ್ರೆಟಾ ಕಾರಿಗೆ ಹತ್ತುತ್ತಿರುವ ಸಂದರ್ಭದಲ್ಲಿ ಸ್ಕಾರ್ಪಿಯೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಮಿಸ್ ಶೂಟೌಟ್ ಮಾಡಿ ಹೋಗಿದ್ದರು. ಶೂಟೌಟ್ ನಡೆಸಿದ ಆರೋಪಿಗಳ ಪತ್ತೆಗೆ ಬಲೆಬೀಸಿ ತ್ವರಿತಗತಿಯಲ್ಲಿ ತನಿಖೆ ನಡೆಸಿದ
ಪೊಲೀಸರು ಈಗಾಗಲೇ 3 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಡಗು ಕುಶಾಲನಗರದ ಕೆ ಜಯನ್ (38), ಮಡಿಕೇರಿಯ ವಿನೋದ್ (34), ಹೆಚ್.ಎಸ್ ಮನೋಜ್ (25) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ನಾಡ ಪಿಸ್ತೂಲು ಮತ್ತು ಎರಡು ಸಜೀವ ತೋಟೆಗಳನ್ನು ಹಾಗೂ ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವೊಂದು ವಿಚಾರದಲ್ಲಿ ಉಂಟಾದ ವೈಷಮ್ಯದಿಂದ ಈ ದಾಳಿ ನಡೆಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಜಯನ್ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಪ್ರಕರಣದ ಆರೋಪಿಯು ಕೂಡಾ ಹೌದು. ಜೂ.6 ರಂದು ರಾತ್ರಿ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸುಳ್ಯದ ಜ್ಯೋತಿ ಸರ್ಕಲ್ ಹತ್ತಿರ ವೆಂಕಟರಮಣ ಸೊಸೈಟಿ ಬಳಿಯಲ್ಲಿ ಘಟನೆ ನಡೆದಿದ್ದು ಸುಳ್ಯ ಜಯನಗರದ ಮಹಮ್ಮದ್ ಸಾಯಿ(39) ಎಂಬವರ ಮೇಲೆ ಸ್ಕಾರ್ಪಿಯೋದಲ್ಲಿ ಬಂದ ತಂಡ ದಾಳಿ ನಡೆಸಿದ್ದರು, ಮಹಮ್ಮದ್ ಸಾಯಿ ಕೂದಲೆಳೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರತ್ಯೇಕ ತಂಡ ರಚನೆ ಮಾಡಿ ತನಿಖೆ ನಡೆಸಿ ಕೇವಲ 3 ದಿನದಲ್ಲಿ ಪ್ರಕರಣ ಭೇಧಿಸಿದ್ದಾರೆ.
ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಭಗವಾನ್ ಸೋಣಾವನೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ, ಪುತ್ತೂರು ಉಪವಿಭಾಗ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನಾ ಪಿ ಕುಮಾರಿ ಮತ್ತು ಸುಳ್ಯ ಪೊಲೀಸು ವೃತ್ತ ನಿರೀಕ್ಷಕರಾದ ನವೀನ್ ಚಂದ್ರ ಜೋಗಿ ಅವರ ಮಾರ್ಗದರ್ಶನದಲ್ಲಿ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಾದ ದಿಲೀಪ್ ಜಿ ಆರ್ ಮತ್ತು ತಂಡ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಸುಳ್ಯ ಎಸ್‌ಐ ದಿಲೀಪ್ ಜಿ.ಆರ್, ಅಪರಾಧ ವಿಭಾಗದ ಎಸ್ಐ ರತ್ನಕುಮಾರ್, ಪಿಎಸ್ಐ ಸರಸ್ವತಿ ಬಿ.ಟಿ, ಎಎಸ್ಐಗಳಾದ ರವೀಂದ್ರ, ಶಿವರಾಮ, ಹೆಚ್.ಸಿಗಳಾದ ಧನೇಶ್, ಉದಯ ಗೌಡ, ಪಿಸಿಗಳಾದ ಅನಿಲ್, ಅನುಕುಮಾರ್, ಹೈದರಾಲಿ, ಸುನಿಲ್ ತಿವಾರಿ, ನಾಗರಾಜ್ ಮತ್ತು ಇತರ ಸಿಬ್ಬಂದಿಗಳು ಭಾಗವಹಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.