ಗುವಾಹಟಿ(ಅಸ್ಸಾಂ): ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಸತತ ಎರಡನೇ ಶತಕ ಬಾರಿಸಿದ್ದಾರೆ. ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ವಿರಾಟ್ ಇಂದು ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೆಂಚುರಿ ಬಾರಿಸುವ ಮೂಲಕ ದಾಖಲೆಯನ್ನು ಬರೆದಿದ್ದಾರೆ. ಕೇವಲ 80 ಎಸೆತಗಳಲ್ಲಿ ವಿರಾಟ್ ಕೊಹ್ಲಿ ಶತಕ ಪೂರೈಸಿದರು. ಒಟ್ಟಾರೆಯಾಗಿ 87 ಎಸೆತಗಳಲ್ಲಿ 113 ರನ್ ಗಳಿಸಿ ವಿರಾಟ್ ಔಟಾದರು. ಇವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿತ್ತು. ಇದು ಏಕದಿನ ಕ್ರಿಕೆಟ್ ನಲ್ಲಿ 45ನೇ ಶತಕವಾಗಿದೆ. ಇದಷ್ಟೇ ಅಲ್ಲದೆ ತವರು ನೆಲದಲ್ಲಿ 20ನೇ ಶತಕ ಕೂಡ ಆಗಿದೆ. ಆ ಮೂಲಕ ತವರು ನೆಲದಲ್ಲಿ ಇದುವರೆಗೆ ಅತಿ ಹೆಚ್ಚು ಶತಕ ಸಿಡಿಸಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ವಿರಾಟ್ ಸರಿಗಟ್ಟಿದ್ದಾರೆ. ವಿರಾಟ್ 99 ಇನ್ನಿಂಗ್ಸ್ ಗಳಲ್ಲಿ ತವರು ನೆಲದಲ್ಲಿ 20 ಶತಕಗಳನ್ನು ಸಿಡಿಸಿದ್ದಾರೆ. ಸಚಿನ್ 160 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಆಶೀಮ್ ಆಮ್ಲಾ 69 ಇನ್ನಿಂಗ್ಸ್ ಗಳಲ್ಲಿ 14, ರಿಕ್ಕಿ ಪಾಂಟಿಂಗ್ 151 ಇನ್ನಿಂಗ್ಸ್ ಗಳಲ್ಲಿ 14 ಶತಕಗಳ ಮೂಲಕ ನಂತರದ ಸ್ಥಾನದಲ್ಲಿ ಇದ್ದಾರೆ. ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 9, ಶ್ರೀಲಂಕಾ ವಿರುದ್ಧ 9 ಏಕದಿನ ಶತಕಗಳನ್ನು ಬಾರಿಸುವ ಮೂಲಕ ಅಗ್ರ ಸ್ಥಾನದಲ್ಲಿ ಇದ್ದಾರೆ. ಸಚಿನ್ ಆಸ್ಟ್ರೇಲಿಯಾ ವಿರುದ್ಧ 9 ಶತಕಗಳನ್ನು ಬಾರಿಸಿದ್ದಾರೆ. ಇನ್ನೂ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಆಸೀಸ್ ವಿರುದ್ಧ ಈವರೆಗೆ 8 ಶತಕಗಳನ್ನು ಗಳಿಸಿದ್ದಾರೆ. ವಿರಾಟ್ ಆಸ್ಟ್ರೇಲಿಯಾ ವಿರುದ್ಧ 8, ಶ್ರೀಲಂಕಾ ವಿರುದ್ಧ ಸಚಿನ್ 8 ಸೆಂಚೂರಿಗಳನ್ನು ಬಾರಿಸಿದ್ದಾರೆ. ಕಳೆದ ವರ್ಷ ಬಾಂಗ್ಲಾದೇಶದ ವಿರುದ್ಧ ಮೂರಂಕಿಯ ಸ್ಕೋರ್‌ನೊಂದಿಗೆ ಏಕದಿನದಲ್ಲಿ ನಾಲ್ಕು ವರ್ಷಗಳ ಶತಕದ ಬರವನ್ನು ನೀಗಿಸಿಕೊಂಡಿದ್ದ ಕೊಹ್ಲಿ, ಹೊಸ ವರ್ಷದಲ್ಲೂ ಅದೇ ವೇಗವನ್ನು ಮುಂದುವರೆಸಿದ್ದಾರೆ. ಒಟ್ಟಾರೆಯಾಗಿ ವಿರಾಟ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 73 ಶತಕಗಳನ್ನು ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಇನ್ನಿಂಗ್ಸ್ ಬಳಿಕ ಮಾತನಾಡಿದ ಕೊಹ್ಲಿ, ನಾನು ಸ್ವಲ್ಪ ವಿರಾಮವನ್ನು ತೆಗೆದುಕೊಂಡಿದ್ದೆ. ಈ ಆಟಕ್ಕಾಗಿ ಒಂದೆರಡು ಅಭ್ಯಾಸದ ಸೆಷನ್ ಗಳಲ್ಲಿ ಭಾಗವಹಿಸಿದ್ದೆ. ಬಾಂಗ್ಲಾದೇಶ ಪ್ರವಾಸದ ನಂತರ ವಿಶ್ವಾಸ ಹೆಚ್ಚಿಸಿಕೊಂಡಿದ್ದೇನೆ. ಹೋಮ್ ಸೀಸನ್ ಪ್ರಾರಂಭಕ್ಕೂ ಮುನ್ನ ಉತ್ಸುಕನಾಗಿದ್ದೆ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
Advertisement
Advertisement