ಸುಳ್ಯ: ನಗರ ಪ್ರದೇಶದ ಕೆಲವು ಕಡೆಗಳಲ್ಲಿ ಹಿಂದೂಪರ ಸಂಘಟನೆಗಳು ಲವ್ ಜಿಹಾದ್ ಬಗ್ಗೆ ಬ್ಯಾನರ್ ಅಳವಡಿಸಿದ್ದು ಇದಕ್ಕೆ ನಗರ ಪಂಚಾಯತ್ ಅನುಮತಿ ನೀಡಿದ್ದರಿಂದ, ಪಕ್ಷೇತರ ಸದಸ್ಯರೊಬ್ಬರು ಮಾಸಿಕ ಸಭೆಯಲ್ಲಿ ಪ್ರಶ್ನಿಸಿದ್ದಾರೆ. ಆ ಫ್ಲೆಕ್ಸನ್ನು ತೆಗೆಯಲು ಸಂಘಟನೆಯವರಿಗೆ ಹೇಳಿದ್ದೇನೆ. ಈಗಾಗಲೇ ತೆಗೆದಿರಬೇಕು ಎಂದು ಅಧ್ಯಕ್ಷರು ಹೇಳಿದ್ದಾರೆ. ಲವ್ ಜಿಹಾದ್ ಎಂಬುದು ಎಲ್ಲಿಯೂ ಇಲ್ಲ. ಕೆಲವರು ರಾಜಕೀಯ ಉದ್ದೇಶಕ್ಕಾಗಿ ಹಾಗೆ ಹೇಳುತ್ತಾರೆ. ಸುಳ್ಯದಲ್ಲಿ ಅಂತಹ ಯಾವುದೇ ಘಟನೆಗಳಿಲ್ಲ. ಸೌಹಾರ್ದತೆಯಿಂದ ಎಲ್ಲರೂ ಇರುವಾಗ ಅಶಾಂತಿ ಉಂಟುಮಾಡುವ ಉದ್ದೇಶದಿಂದ ಆ ಫ್ಲೆಕ್ಸ್ ಹಾಕಲಾಗಿದೆ. ಇದರಿಂದ ಸೌಹಾರ್ದತೆಗೆ ಧಕ್ಕೆಯಾಗುತ್ತದೆ. ಮುಖ್ಯಾಧಿಕಾರಿಯವರು ಇದಕ್ಕೆ ಅವಕಾಶ ಕೊಟ್ಟದ್ದು ಸರಿಯೇ ? ಎಂದು ನ.ಪಂ. ಪಕ್ಷೇತರ ಸದಸ್ಯ ಕೆ.ಎಸ್.ಉಮ್ಮರ್ ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಸದಸ್ಯ ಎಂ.ವೆಂಕಪ್ಪ ಗೌಡರು, ” 1991 ರಲ್ಲಿ ಸುಳ್ಯದಲ್ಲಿ ಕೋಮುಗಲಭೆ ಆದಾಗ ಏನು ಸಮಸ್ಯೆ ಆಗಿದೆ ಎಂದು ಗೊತ್ತಿರುವವರಿಗೆ ಗೊತ್ತಿದೆ. ಅಂದು ಬೆಂಕಿ ಕೊಟ್ಟವರು ಮತ್ತು ಬೆಂಕಿ ಕೊಡಿಸಿದವರು ಅರ್ಧದಲ್ಲೇ ಹೋಗಿದ್ದಾರೆ. ಈಗ ಇಲ್ಲಿ ಎಲ್ಲರೂ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಈ ಮೊದಲು ನಡೆದಂತಹ ಘಟನೆಗಳು ಇನ್ನು ಮುಂದೆ ಇಲ್ಲಿ ನಡೆಯಬಾರದು. ಅಧ್ಯಕ್ಷ ವಿನಯಕುಮಾರ್ ರವರು ಕೂಡ ಮೊನ್ನೆ ನಮ್ಮೊಡನೆ ಒಪ್ಪಿಕೊಂಡಿದ್ದಿರಿ. ಆದರೆ ನಂತರ ಒಂದು ಕಡೆಯವರೊಂದಿಗೆ ಮನವಿ ಕೊಡಲು ಹೋಗಿದ್ದಿರಿ. ನೀವು ನ.ಪಂ. ಅಧ್ಯಕ್ಷರಾಗಿ ಹೀಗೆ ಮಾಡಿದ್ದು ಸರಿಯಲ್ಲ ” ಎಂದು ಹೇಳಿದರು. ನ.ಪಂ.ಮುಖ್ಯಾಧಿಕಾರಿಯವರು ಉತ್ತರಿಸಿ, ” ನೀವು ಹೇಳಿದ್ದು ಸರಿಯಿದೆ. ಅವರು ಅನುಮತಿ ಕೇಳಿದ್ದರು. ಅದರಲ್ಲಿ ಏನು ಮ್ಯಾಟರ್ ಇದೆ ಎಂಬುದು ನಮಗೆ ಗೊತ್ತಿರಲಿಲ್ಲ. ಅದರಲ್ಲಿ ನೇರವಾಗಿ ಯಾರನ್ನೂ ಹೆಸರಿಸಿಲ್ಲ. ಆದರೆ ಆ ರೀತಿಯ ಹಾಕುವುದು ಎಂಬ ಭಾವನೆ ನನ್ನಲ್ಲೂ ಇದೆ. ಆದರೆ 15 ದಿನಕ್ಕೆ ಅನುಮತಿ ಕೊಟ್ಟಾಗಿದ್ದುದರಿಂದ ನಾವು ಏನೂ ಹೇಳಿಲ್ಲ ” ಎಂದು ಹೇಳಿದರು. ನೀವು ಒಮ್ಮೆ 15 ದಿನಕ್ಕೆ ಅನುಮತಿ ಕೊಟ್ಟಿರುವುದರಿಂದ ಆ ಅವಧಿ ಮುಗಿಯುವ ವರೆಗೆ ಸುಮ್ಮನಿರೋಣ ಎಂದು ನಾವೂ ಸುಮ್ಮನಿದ್ದೆವು. ನಮ್ಮ ಸಮಾಜದೊಳಗೆ ಕೂಡ ಈ ವಿಚಾರ ಬಾರೀ ಚರ್ಚೆಯಾಗುತ್ತಿದೆ. ನಮ್ಮವರು ಇದ್ದೂ ಏನೂ ಮಾತಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. 15 ದಿನ ಕಳೆದರೂ ಫ್ಲೆಕ್ಸ್ ತೆಗೆದಿಲ್ಲ. ಅದನ್ನು ತೆಗೆಯದಿದ್ದರೆ ನಾವೂ ಬ್ಯಾನರ್ ಹಾಕುತ್ತೇವೆ ” ಎಂದು ಉಮ್ಮರ್ ಹೇಳಿದರು. ಈ ಸಂದರ್ಭ ಅವರಿಗೆ ಸಾತ್ ನೀಡಿದ ಮತ್ತೋರ್ವ ಸದಸ್ಯ ಶರೀಫ್ ಕಂಠಿ ನ್ಯಾಯಾಲಯದಲ್ಲಿಯೂ ಕೂಡ ಲವ್ ಜಿಹಾದ್ ಎಂಬ ಪದ ಇರುವುದಿಲ್ಲ ಎಂದು ವಿಷಯ ಪ್ರಸ್ತಾಪವಾಗಿದ್ದು ಬಳಿಕವೂ ನ್ಯಾಯಾಲಯದ ಮಾತಿಗೂ ಬೆಲೆ ಕೊಡದೆ ಈ ರೀತಿಯ ಪದಗಳನ್ನು ಬಳಸುವುದು, ಅಲ್ಲದೆ ಸಮಾಜದಲ್ಲಿ ಒಡಕನ್ನು ಉಂಟು ಮಾಡುವುದು ಸರಿಯಲ್ಲ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕರವರು, ನ.ಪಂ. ಅಧ್ಯಕ್ಷತೆಯಂತಹ ಸಾಂವಿಧಾನಿಕ ಹುದ್ದೆಯಲ್ಲಿ ನಾನಿರುವಾಗ ಅದಕ್ಕೆ ಸರಿಯಾಗಿ ಇರಬೇಕಾಗುತ್ತದೆ. ಹುದ್ದೆಯಲ್ಲಿ ಇಲ್ಲದಿರುವಾಗ ಹೊರಗಡೆ ಸಾಕ್ಷ್ಯಾಧಾರ ಸಹಿತ ನಾವು ಮಾತಾಡ್ತೇವೆ. ಆ ವಿಚಾರ ಬೇರೆ ಸಂಘಟನೆಯವರಿಗೆ ಬ್ಯಾನರ್ ತೆಗೆಯಲು ಹೇಳಿದ್ದೇನೆ. ಈಗಾಗಲೇ ಅವರು ತೆಗೆದಿರಬೇಕು ” ಎಂದು ಹೇಳಿದರು. ಹಾಗಿದ್ದರೆ ದೇಶದಲ್ಲಿ ಇತ್ತೀಚಿಗೆ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆ ಗಗನಕ್ಕೇರುತ್ತಿದ್ದು ಇದನ್ನು ತಿಳಿಯಪಡಿಸುವ ಮತ್ತು ಕಳೆದ ಕೆಲವು ವರ್ಷಗಳ ಹಿಂದೆ ಇದ್ದಂತಹ ಬೆಲೆಯನ್ನು ಮತ್ತು ಪ್ರಸ್ತುತ ಇರುವ ಬೆಲೆಗಳಿರುವ ಬ್ಯಾನರನ್ನು ನಾನು ನಗರದ ಬೇರೆ ಬೇರೆ ಕಡೆಗಳಲ್ಲಿ ಅಳವಡಿಸುತ್ತೇನೆ. ಅನುಮತಿ ಕೊಡುತ್ತೀರಲ್ಲ ?” ಎಂದು ವೆಂಕಪ್ಪ ಗೌಡರು ಕೇಳಿದಾಗ ” ಅನುಮತಿ ಕೊಡುತ್ತೇವೆ ” ಎಂದು ಅಧ್ಯಕ್ಷರು ಹೇಳಿದರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ