ಪರಿಸರ ಉಳಿಸಿ ಹೋರಾಟ ಸ್ವತಃ ಪರಿಸರವನ್ನು ಪ್ರೀತಿಸುವುದರಿಂದ ಆರಂಭವಾಗಲಿ: ಪ್ರಕಾಶ ಮೂಡಿತ್ತಾಯ

ಸುಳ್ಯ, ಸೆ.28; ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಸುಳ್ಯ ಇಲ್ಲಿನ ವಿದ್ಯಾರ್ಥಿಗಳಿಗೆ ‘ಪಶ್ಚಿಮ ಘಟ್ಟಗಳ ಸಂರಕ್ಷಣೆ’ ಕುರಿತಾಗಿ ವಿಚಾರಗೋಷ್ಠಿ ಕಾರ್ಯಕ್ರಮ ಸೆಪ್ಟೆಂಬರ್ 28 ಶನಿವಾರದಂದು ಕಾಲೇಜಿನ ಸ್ವರ್ಣಶ್ರೀ ಸಭಾಂಗಣದಲ್ಲಿ ನಡೆಯಿತು.

ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಜಾಗೃತಿಗಾಗಿ ಆಯೋಜಿಸಿದ ಈ ವಿಚಾರಗೋಷ್ಠಿಯನ್ನು ದೀಪ ಬೆಳಗಿ ಅಶೋಕ ವೃಕ್ಷಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿದ ಸರಕಾರಿ ಪದವಿಪೂರ್ವ ಕಾಲೇಜಿನ ಉಪ-ಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯರು ‘ಪರಿಸರ ಉಳಿಸಿ ಹೋರಾಟ ಕೇವಲ ಪ್ರತಿಭಟನೆಗಷ್ಟೇ ಸೀಮಿತವಾಗುತ್ತಿದೆ. ನಿಜವಾದ ಪರಿಸರ ವ್ಯವಸ್ಥೆಗಳನ್ನು ಅರಿತುಕೊಂಡು ಅವನ್ನು ಯಥಾ ಸ್ಥಿತಿಯಲ್ಲಿ ಕಾಪಾಡಿಕೊಳ್ಳುವುದೇ ನಿಜವಾದ ಪರಿಸರ ಕಾಳಜಿ. ಪ್ರತಿ ನಾಗರಿಕನೂ ಸ್ವತಃ ಪರಿಸರವನ್ನು ಪ್ರೀತಿಸುವುದರಿಂದ ತನ್ನ ಜವಾಬ್ದಾರಿ ಅರಿತು ಬದುಕುವುದರಿಂದ ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಪ್ರಕೃತಿಯನ್ನು ಉಳಿಸಬಹುದು’ ಎಂದು ಹೇಳಿದರು.

ಪಶ್ಚಿಮ ಘಟ್ಟಗಳ ವನ್ಯಜೀವಿ ಅಧ್ಯಯನ ಮತ್ತು ಸಂರಕ್ಷಣೆ ಯೋಜನೆಗಳಲ್ಲಿ ಸತತ ಭಾಗವಹಿಸುತ್ತಿರುವ ಭುವನೇಶ್ವರ ಕೈಕಂಬ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ ಕಾಡಿನ ಪ್ರತಿ ಜೀವಸಂಕುಲದ ಅನನ್ಯ ಕೊಡುಗೆಗಳ ಬಗ್ಗೆ, ಕಾಡಿನ ಸಂರಕ್ಷಣೆಗೆ ವನ್ಯಜೀವಿಗಳ ಅಗತ್ಯತೆ ಹಾಗೂ ಅವುಗಳ ಉಳಿವಿಗೆ ನಾವು ಕೈಗೊಳ್ಳಬೇಕಾದ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ಸರ್ಕಾರದ ವಿವಿಧ ಯೋಜನೆಗಳಲ್ಲಿ ಹಲವಾರು ಇಲಾಖೆಗಳ ವಿಜ್ಞಾನಿಗಳ ಜೊತೆಗೂಡಿ ವಿದ್ಯಾರ್ಥಿಗಳು ಭಾಗವಹಿಸಬಹುದಾದ ಅಧ್ಯಯನ, ಸಂಶೋಧನೆ ಸಂಬಂಧಿತ ಅವಕಾಶಗಳ ಬಗ್ಗೆ ತಿಳಿಸಿದರು. ವಿಜ್ಞಾನ ವಿದ್ಯಾರ್ಥಿಗಳು ಹೆಚ್ಚು ಪ್ರಕೃತಿ ಸಂರಕ್ಷಣೆ ಸಂಬಂಧಿತ ವಿಷಯಗಳಲ್ಲಿ ಆಸಕ್ತಿ ಹೆಚ್ಚಿಸಿಕೊಂಡು ಸಂಬಂದಿಸಿದ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳುವಂತೆ ಪ್ರೇರೇಪಿಸಿದರು.

ಕಾರ್ಯಕ್ರಮದ ಗೌರವ ಅತಿಥಿಗಳಾಗಿದ್ದ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯದ ಹಿರಿಯ ವಿದ್ಯಾರ್ಥಿ ಹಾಗೂ ಎನ್ನೆಂಸಿ ಆಡಳಿತ ಅಧಿಕಾರಿಯಾಗಿರುವ ಚಂದ್ರಶೇಖರ ಪೇರಾಲು ಮಾತನಾಡಿ ತನ್ನ ಕಾಲೇಜು ಜೀವನವನ್ನು ನೆನಪಿಸಿಕೊಂಡು ಹಿಂದೆ ಬಳಸುತ್ತಿದ್ದ ನದಿ ನೀರಿನ ಶುಭ್ರತೆಯನ್ನು ಪ್ರಸ್ತಾಪಿಸಿ ಇಂದು ಶುದ್ಧ ಕುಡಿಯುವ ನೀರಿಗೆ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿ ನಾವು ಇನ್ನಾದರೂ ಜಾಗೃತರಾದರೆ ಮಾತ್ರ ಮುಂದೆ ಆಮ್ಲಜನಕವನ್ನು ಈ ರೀತಿ ಪಡೆದುಕೊಳ್ಳುವ ಪರಿಸ್ಥಿತಿಯಿಂದ ಪಾರಾಗಬಹುದು ಎಂದರು. ವಿದ್ಯಾರ್ಥಿಗಳು ಪರಿಸರ ಅಧ್ಯಯನ ಮತ್ತು ಉದ್ಯೋಗಕ್ಕೆ ಪದವಿ ವಿದ್ಯಾಭ್ಯಾಸದಲ್ಲಿ ಸಿಗುವ ಅವಕಾಶಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋಹನ ಗೌಡ ಬಿ ಕೆ ವಹಿಸಿದ್ದರು.
ನೇಚರ್ ಕ್ಲಬ್ ಸಂಯೋಜಕರಾದ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕು. ಮನಸ್ವಿ ಮತ್ತು ತಂಡದವರು ಪ್ರಾರ್ಥಿಸಿ, ಕಾರ್ತಿಕ್ ಜಿ ಶರ್ಮಾ ಅತಿಥಿಗಳನ್ನು ಪರಿಚಯಿಸಿ, ನೇಚರ್ ಕ್ಲಬ್ ಕಾರ್ಯದರ್ಶಿ ಕು. ಶಿಲ್ಪಾ ವಂದಿಸಿದರು. ಕು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ನೀರೆರೆದು ಉದ್ಘಾಟಿಸಿದ ಸೀತಾ ಅಶೋಕ ಗಿಡವನ್ನು ಕಾಲೇಜು ಆವರಣದ ಒಳಗೆ ನೆಡಲಾಯಿತು. ನಂತರ ಹೈಸ್ಕೂಲ್ ವಿಭಾಗದ ಇಕೋ ಕ್ಲಬ್ ಸಂಯೋಜಕರ ಜೊತೆ ಸಂವಾದದಲ್ಲಿ ಭಾಗವಹಿಸಿ, ಅಲ್ಲಿನ ಆರೋಗ್ಯ ಕೊಠಡಿ ಮತ್ತು ಸೌಲಭ್ಯಗಳನ್ನು ವೀಕ್ಷಿಸಿ ಶಿಕ್ಷಕಿ ಮಮತಾ ಮೂಡಿತ್ತಾಯರವರಲ್ಲಿ ಮಾಹಿತಿ ಪಡೆದುಕೊಳ್ಳಲಾಯಿತು.


ಎನ್ನೆಂಸಿ ಜೀವ ವಿಜ್ಞಾನ ಪದವಿ ವಿಭಾಗದ ಉಪನ್ಯಾಸಕರಾದ ಕೃತಿಕಾ, ಅಜಿತ್ ಕುಮಾರ್, ಹರ್ಷಕಿರಣ, ಪಲ್ಲವಿ ಮತ್ತು ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾದ ಡಾ. ನವೀನ್ ಜಿ ಪಿ ಎ ಎನ್ ಹಾಗೂ ಎಲ್ಲಾ ಉಪನ್ಯಾಸಕ ಉಪನ್ಯಾಸಕೇತರ ವೃಂದದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ನೇಚರ್ ಕ್ಲಬ್ ಸದಸ್ಯರು ಕೆಲವು ಪರಿಸರ ಗೀತೆಗಳನ್ನು ಹಾಡಿದರು. ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡರು.

Leave a Reply

Your email address will not be published. Required fields are marked *