ಸುಳ್ಯ: ಕೆವಿಜಿ ದಂತ ಮಹಾ ವಿದ್ಯಾಲಯದಲ್ಲಿ ಪದವಿ ಪ್ರದಾನ ಹಾಗು ವಾರ್ಷಿಕೋತ್ಸವ ಸಮಾರಂಭವು ಜ.15ರಂದು ಅಮರಜ್ಯೋತಿ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾ ಭವನದಲ್ಲಿ ನಡೆಯಿತು. ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪ್ರದಾನ ಮಾಡಿದ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರು ಹಾಗು ರಾಜಸ್ಥಾನ ಉಯಪುರ ಫೆಸಿಫಿಕ್ ದಂತ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಭಗವಾನ್‌ದಾಸ್ ರೈ ಮಾತನಾಡಿ, ತಮ್ಮ ಸೇವೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡುವುದು ಯುವ ವೈದ್ಯರ ವೃತ್ತಿ ಜೀವನದ ಮುಖ್ಯ ಗುರಿಯಾಗಿರಬೇಕು. ಹಣ, ಸಂಪತ್ತು ಗಳಿಸುವುದಕ್ಕಿಂತ ಸೇವೆಯೇ ಅತ್ಯಂತ ಶ್ರೇಷ್ಠಾವಾದುದು. ಸೇವೆಯ ಮೂಲಕ ಗುರುತಿಸಿ ಕೊಳ್ಳುವ ಮೂಲಕ ನಿಮ್ಮ ತಂದೆ ತಾಯಿಗಳ ತ್ಯಾಗಕ್ಕೆ ನೀವು ಪ್ರತಿಫಲ ನೀಡಬೇಕು ಎಂದು ಅವರು ಕರೆ ನೀಡಿದರು. ಆಧುನಿಕ ಜಗತ್ತಿನ ಬದಲಾವಣೆ, ತಾಂತ್ರಿಕ ಬದಲಾವಣೆಗೆ ತಕ್ಕಂತೆ ಶಿಕ್ಷಣ ಪಡೆದು ಈ ಕ್ಷೇತ್ರದಲ್ಲಿ ಸಂಶೋಧನಾತ್ಮಕ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು. ಕೆವಿಜಿ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಹಾಗು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸವಾಲುಗಳನ್ನು ಎದುರಿಸಿ, ಅವಕಾಶಗಳನ್ನು ಬಳಸಿಕೊಂಡು ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದು ಹೇಳಿದರು. ಉತ್ತಮ ಸೇವಾ ಮನೋಭಾವದ ಮೂಲಕ ವೃತ್ತಿಜೀವನದಲ್ಲಿ ಉನ್ನತಿಯನ್ನು ಗಳಿಸಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಆ ಮೂಲಕ ನಿಮ್ಮ ಪೋಷಕರಿಗೆ ಗೌರವ ಮತ್ತು ಕಲಿತ ಕಾಲೇಜಿಗೆ ಉತ್ತಮ ಹೆಸರು ತರಬೇಕು ಎಂದು ಅವರು ಹೇಳಿದರು. ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರು ಹಾಗು ರಾಜಸ್ಥಾನ ಉಯಪುರ ಫೆಸಿಫಿಕ್ ದಂತ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಭಗವಾನ್‌ದಾಸ್ ರೈ, ಕೆವಿಜಿ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಹಾಗು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ವಿ, ಕೆವಿಜಿ ಚಾರಿಟೇಬಲ್ ಟ್ರಸ್ಟಿ ಡಾ.ಜ್ಯೋತಿ ಆರ್.ಪ್ರಸಾದ್, ಕೆವಿಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ. ಊರುಬೈಲು, ದಂತ ಮಹಾ ವಿದ್ಯಾಲಯದ ಪ್ರಾಂಶುಪಾಲೆ ಡಾ.ಮೋಕ್ಷಾ ನಾಯಕ್ ಅವರು ಪದವಿ ಪ್ರದಾನ ಮಾಡಿದರು. ಡಾ.ಭಗವಾನ್‌ದಾಸ್ ರೈ ಹಾಗು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಎಕ್ಸಿಕ್ಯುಟಿವ್ ಸದಸ್ಯರಾಗಿ ಆಯ್ಕೆಯಾದ ಕೆವಿಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ. ಊರುಬೈಲು ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ವಿವಿಧ ವಿಭಾಗಗಳ ಸಾಧಕರನ್ನು ಗೌರವಿಸಲಾಯಿತು. ಕಾಲೇಜಿನ ಸ್ನಾತಕೋತ್ತರ ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ.ಶರತ್‌ಕುಮಾರ್ ಶೆಟ್ಟಿ, ಕೆವಿಜಿ ದಂತ ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಎನ್.ಎ.ರಾಮಚಂದ್ರ, ಡಾ.ಕೃಷ್ಣಪ್ರಸಾದ್, ಡಾ.ಮನೋಜ್ ಕುಮಾರ್, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ದಯಾಕರ್, ಡಾ.ನುಸ್ರತ್ ಫರೀದ್, ಡಾ.ಜಯಪ್ರಸಾದ್ ಆನೆಕಾರ್, ಡಾ.ಸುಹಾಸ್ ರಾವ್,ಡಾ.ಶೈಲಾ ಪೈ, ಡಾ.ಪ್ರಸನ್ನಕುಮಾರ್, ಡಾ.ಕೃಷ್ಣಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆವಿಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ. ಊರುಬೈಲು ಸ್ವಾಗತಿಸಿ,ದಂತ ಮಹಾ ವಿದ್ಯಾಲಯದ ಪ್ರಾಂಶುಪಾಲೆ ಡಾ.ಮೋಕ್ಷಾ ನಾಯಕ್ ವರದಿ ವಾಚಿಸಿದರು. ಡಾ.ಸುಪ್ರೀಯ ಹೆಚ್. ವಂದಿಸಿದರು.ಡಾ.ಅಂಜಲಿ ಸಜ್ಜನ್ ಹಾಗು ಡಾ.ಮನೀಷಾ ರೈ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಆಡಳಿತಾಧಿಕಾರಿ ಬಿ.ಟಿ.ಮಾಧವ, ವಿವಿಧ ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು.ಬಳಿಕ ಕಾಲೇಜಿನ ವಾರ್ಷಿಕೋತ್ಸವ, ಸಾಂಸ್ಕೃತಿಕ ಸಂಭ್ರಮ ನಡೆಯಿತು.
Advertisement
Advertisement