ಇಲಿಗಳು ಕೇವಲ ಆರು ತಿಂಗಳ ಮಗುವಿನ ಅಂಗಾಂಗಳನ್ನೇ ತಿಂದು ವಿರೂಪಗೊಳಿಸಿದ ಭಯಾನಕ ಘಟನೆ ಅಮೆರಿಕದ ಇಂಡಿಯಾನಾದಲ್ಲಿ ನಡೆದಿದೆ. ಮನೆಯನ್ನು ಅತ್ಯಂತ ಕೆಟ್ಟ ಸ್ಥಿತಿಯಲ್ಲಿರಿಸಿ, ಇಲಿಗಳ ರಾಶಿಯಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದ ತಂದೆಗೆ ಬರೋಬ್ಬರಿ 16 ವರ್ಷಗಳ ಗರಿಷ್ಠ ಜೈಲು ಶಿಕ್ಷೆ ವಿಧಿಸಲಾಗಿದೆ.
ಈ ಘಟನೆ 2023ರ ಸೆಪ್ಟೆಂಬರ್‌ನಲ್ಲಿ ನಡೆದಿದೆ. ಡೇವಿಡ್ ಸ್ಕೋನಬಾಮ್ ಎಂಬ ವ್ಯಕ್ತಿಯ ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದ ಹಿನ್ನೆಲೆ ಆತನ 6 ತಿಂಗಳ ಮಗುವಿನ ಮುಖ, ಕೈಕಾಲು, ಬೆರಳುಗಳು ಸೇರಿದಂತೆ 50 ಕ್ಕೂ ಹೆಚ್ಚು ಕಡೆ ಇಲಿಗಳು ಕಚ್ಚಿ ಗಾಯ ಮಾಡಿತ್ತು. ಈ ಬಗ್ಗೆ ಡೇವಿಡ್ 911 ಕ್ಕೆ ಕರೆ ಮಾಡಿ, ಮಗು ಇಲಿಗಳ ದಾಳಿಯಿಂದಾಗಿ ರಕ್ತದ ಮಡುವಿನಲ್ಲಿ ಇರುವುದಾಗಿ ತಿಳಿಸಿದ್ದಾನೆ.
ಬಳಿಕ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಆದರೆ ಇಲಿಗಳ ದಾಳಿ ಎಷ್ಟು ಭಯಾನಕವಾಗಿತ್ತು ಎಂದರೆ, ಮಗುವಿನ ಬಲಗೈಯ ಎಲ್ಲಾ ನಾಲ್ಕು ಬೆರಳುಗಳನ್ನು ತಿಂದು ಹಾಕಿತ್ತು. ಇತರ ಬೆರಳುಗಳಲ್ಲಿ ಅದರ ತುದಿಯ ಮೂಳೆಗಳು ಕಾಣಿಸುತ್ತಿತ್ತು. ಇಲಿಗಳು ಮಗುವನ್ನು ಶಾಶ್ವತವಾಗಿ ವಿಕಾರಗೊಳಿಸಿತ್ತು. ಇದರ ಪರಿಣಾಮ ಡೇವಿಡ್ ಜೀವಮಾನವನ್ನೇ ಜೈಲಿನಲ್ಲಿ ಕಳೆಯುವಂತೆ ಮಾಡಿದೆ.
ತನ್ನ ಮಕ್ಕಳ ನಿರ್ಲಕ್ಷ್ಯ ಮತ್ತು ಅಪಾಯಕ್ಕೆ ಸಂಬಂಧಿಸಿದ ಮೂರು ಅಪರಾಧ ಆರೋಪಗಳ ಮೇಲೆ ಸ್ಕೋನಬಾಮ್‌ನನ್ನು 2024 ಸೆಪ್ಟೆಂಬರ್‌ನಲ್ಲಿ ದೋಷಿ ಎಂದು ಘೋಷಿಸಲಾಯಿತು. ಬುಧವಾರ ಅಕ್ಟೋಬರ್ 2 ರಂದು ಆತನಿಗೆ ಕೋರ್ಟ್ 16 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.