ಅಹಮದಾಬಾದ್‌: ಕಿವೀಸ್‌ ವಿರುದ್ಧದ ಸರಣಿಯ ಅಂತಿಮ ಟಿ20 ಪಂದ್ಯದಲ್ಲಿ ಮಗದೊಮ್ಮೆ ಶುಬ್ಮನ್ ಗಿಲ್ ಮಿಂಚಿದ್ದಾರೆ. ಈಗಾಗಲೇ ಏಕದಿನ ಸರಣಿಯಲ್ಲಿ ದ್ವಿಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದ ಗಿಲ್‌, ಇಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಇವರ ಅಮೋಘ ಶತಕದ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 234 ರನ್‌ ಕಲೆ ಹಾಕಿದೆ. ಆ ಮೂಲಕ ಪ್ರವಾಸಿ ಕಿವೀಸ್‌ ತಂಡಕ್ಕೆ ಸರಣಿ ಗೆಲ್ಲಲು 235 ರನ್‌ಗಳ ಗುರಿ ನೀಡಿದ್ದಾರೆ. ಇಂದಿನ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಬೃಹತ್ ಮೊತ್ತದ ರನ್ ಕಲೆ ಹಾಕುವ ಭರವಸೆಯೊಂದಿಗೆ ಕಣಕ್ಕಿಳಿಯಿತು. ಲೆಕ್ಕಾಚಾರದಂತೆಯೇ ಭಾರತ ಬೃಹತ್‌ ಮೊತ್ತ ಕಲೆ ಹಾಕಿದೆ. ಇತ್ತೀಚೆಗಷ್ಟೇ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ, ಈ ಸಾಧನೆ ಮಾಡಿದ ಯುವ ಆಟಗಾರನಾಗಿ ಗಿಲ್‌ ಹೊರಹೊಮ್ಮಿದ್ದರು. ಇಂದಿನ ಟಿ20 ಪಂದ್ಯದಲ್ಲಿ ಮತ್ತೆ ಶತಕ ಸಿಡಿಸುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ಅವರು ತಲುಪಿದ್ದಾರೆ. ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ ಶತಕ ಸಿಡಿಸಿದ ಭಾರತದ ಐದನೇ ಆಟಗಾರನಾಗಿ ಗಿಲ್‌ ಹೊರಹೊಮ್ಮಿದ್ದಾರೆ. ಈ ಹಿಂದೆ ಸುರೇಶ್ ರೈನಾ, ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು. ಅದೇ ರೀತಿ ಟಿ20 ಪಂದ್ಯದಲ್ಲಿ ವೈಯುಕ್ತಿಕ ಭಾರತೀಯ ಆಟಗಾರ ಎಂಬ‌ ನಿಟ್ಟಿನಲ್ಲಿ ಅತೀ ಹೆಚ್ಚು ರನ್ಸ್ ಸಿಡಿಸಿದ್ದಾರೆ. ಶುಬ್ಮನ್ ಗಿಲ್ 126(63), ವಿ.ಕೊಹ್ಲಿ 122(61), ರೊ.ಶರ್ಮಾ 118(43) ಸಿಡಿಸಿದ್ದಾರೆ. ನ್ಯೂಜಿಲ್ಯಾಂಡ್‌ ವಿರುದ್ದ ಇತ್ತೀಚೆಗಷ್ಟೇ ಏಕದಿನದಲ್ಲಿ ವೈಯಕ್ತಿಕ ಅತಿ ಹೆಚ್ಚು ರನ್‌ ಕಲೆ ಹಾಕಿದ್ದ ಗಿಲ್‌, ಇಂದಿನ ಪಂದ್ಯದಲ್ಲಿ ಟಿ20ಯಲ್ಲೂ ಅತಿ ಹೆಚ್ಚು ರನ್‌ ಕಲೆ ಹಾಕಿದರು. ಕಳೆದ ಹಲವು ಪಂದ್ಯಗಳಲ್ಲಿ ವಿಫಲವಾಗಿದ್ದ ಇಶಾನ್‌ ಕಿಶನ್‌, ಇಂದು ಕೂಡಾ ವಿಫಲರಾದರು. ಕೇವಲ ಒಂದು ರನ್‌ ಗಳಿಸಿ ನಿರ್ಗಮಿಸಿದರು. ವನ್‌ ಡೌನ್ ಕ್ರಮಾಂಕದಲ್ಲಿ ಬಂದ ರಾಹುಲ್‌ ತ್ರಿಪಾಠಿ ಬಂದೊಡನೆ ಅಬ್ಬರಿಸಿದರು. ಮೂರು ಭರ್ಜರಿ ಸಿಕ್ಸರ್‌ ಸಹಿತ 44 ರನ್‌ ಸಿಡಿಸಿದರು. ಇವರ ನಿರ್ಗಮನದ ಬಳಿಕ ಬಂದ ಸೂರ್ಯಕುಮಾರ್‌ ಯಾದವ್‌, ಕ್ಷಣಕಾಲ ಅಬ್ಬರಿಸಿ 24 ರನ್‌ ಸಿಡಿಸಿದರು. ಅಂತಿಮ ಓವರ್‌ಗಳಲ್ಲಿ ನಾಯಕ ಪಾಂಡ್ಯ ಹಾಗೂ ಗಿಲ್‌ ಉತ್ತಮ ಜೊತೆಯಾಟ ನೀಡಿದರು. ಪಾಂಡ್ಯ 30 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. 126 ರನ್‌ ಗಳಿಸಿ ಅಜೇರಾಗಿ ಉಳಿದ ಗಿಲ್‌, ಭಾರತದ ಪರ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ