ಸುಳ್ಯ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳ ಸಹಕಾರದಲ್ಲಿ ನಾಳೆಯಿಂದ ಮಾ.1ರಿಂದ‌ ಸರಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭವಾಗಲಿದೆ. ಇದರಿಂದ ರಾಜ್ಯದಾದ್ಯಂತ ಸರಕಾರಿ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ವೇತನ ಭತ್ಯೆಗಳ ಪರಿಷ್ಕರಣೆ ಹಾಗೂ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸರಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಠಾವಧಿ ಮುಷ್ಕರ ನಡೆಸಲು ನೌಕರರ ಸಂಘ ಕರೆ ನೀಡಿದೆ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ನೀಡಬೇಕು. ಹೊಸ ಪಿಂಚಣಿ ಬದಲಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂಬ ಬೇಡಿಕೆ ಮುಂದಿರಿಸಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ತಾಲೂಕು ಸಂಘದ ವತಿಯಿಂದ ಮುಷ್ಕರಕ್ಕೆ ಸಿದ್ಧತೆ ಮಾಡಿಕೊಂಡಿದ್ದು ಸುಳ್ಯ ತಾಲೂಕಿನಲ್ಲಿಯೂ ಬಹುತೇಕ ಎಲ್ಲಾ ಇಲಾಖೆಗಳ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆಯ ತುರ್ತು ಸೇವೆ, ತೀವ್ರ ನಿಘಾ ಘಟಕ, ಒಳರೋಗಿ ಚಿಕಿತ್ಸೆ, ಪೋಸ್ಟ್ ಮಾರ್ಟಂ ಮತ್ತಿತರ ತುರ್ತು ಸೇವೆ ಮಾತ್ರ ಲಭ್ಯವಾಗಲಿದೆ. ತಾಲೂಕು ಕಚೇರಿ, ತಾಲೂಕು ಪಂಚಾಯತ್, ನಗರ ಪಂಚಾಯತ್, ಗ್ರಾಮ ಪಂಚಾಯತ್, ಸೇರಿದಂತೆ ವಿವಿಧ ಇಲಾಖೆಗಳ ನೌಕರರು, ಶಾಲಾ ಶಿಕ್ಷಕರು ಮುಷ್ಕರದಲ್ಲಿ ಭಾಗವಹಿಸುತ್ತಿದ್ದು ಸೇವೆಗಳು ವ್ಯತ್ಯವಾಗಲಿದೆ ಎಂದು ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪೃಥ್ವಿಕುಮಾರ್ ಟಿ. ತಿಳಿಸಿದ್ದಾರೆ.
ಸರಕಾರಿ ನೌಕರರು ಬೀದಿಗೆ ಇಳಿಯುವುದಿಲ್ಲ, ಘೋಷಣೆ ಕೂಗುವುದಿಲ್ಲ, ಶಾಮೀಯಾನ ಟೆಂಟ್ ಹಾಕಿ ಕುಳಿತುಕೊಳ್ಳುವುದಿಲ್ಲ, ಪ್ರತಿಭಟನೆ ಮೆರವಣಿಗೆ ಮಾಡುವುದಿಲ್ಲ, ಮನವಿ ಕೊಡುವುದಿಲ್ಲ. ಆದರೆ ನೌಕರರ ಭವಿಷ್ಯದ ಬದುಕಿಗಾಗಿ ಪ್ರತಿಯೊಬ್ಬ ಸರ್ಕಾರಿ ನೌಕರ, ಸರ್ಕಾರಿ ಕರ್ತವ್ಯಕ್ಕೆ ಗೈರು ಹಾಜರಾಗಿ ಮನೆಯಲ್ಲಿ ಉಳಿದುಕೊಂಡು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಪೃಥ್ವಿ ಕುಮಾರ್ ಹೇಳಿದ್ದಾರೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ