ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸಹಿತ ಕರ್ನಾಟಕ ಕರಾವಳಿ ಭಾಗದಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ಕರೆ ಗಂಟೆ ನೀಡಿದೆ. ಕರಾವಳಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಅದರಲ್ಲೂ ಅವಿಭಾಜಿತ ದ.ಕ ಜಿಲ್ಲೆಯಲ್ಲಿ ಈ ರೀತಿಯ ಎಚ್ಚರಿಕೆಯನ್ನು ಹವಮಾನ ಇಲಾಖೆ ಪ್ರಕಟಸಿದ್ದು ಅಪರೂಪದ ವಿದ್ಯಮಾನವಾಗಿದೆ. ಹವಾಮಾನ ತಜ್ಞ ಡಾ| ರಾಜೇಗೌಡ ಪ್ರಕಾರ, “ಮೆಡಿಟರೇನಿಯನ್‌ ಪ್ರದೇಶದಲ್ಲಿ ಡಸ್ಟ್‌ಸ್ಟಾರ್ಮ್ (ಧೂಳುಮಿಶ್ರಿತ ಬಿರುಗಾಳಿ) ಆರಂಭ ವಾಗಿದೆ. ವಾತಾವರಣದಲ್ಲಿ ಒತ್ತಡ ಕಡಿಮೆ ಯಾದರೆ ಡಸ್ಟ್‌ ಸ್ಟಾರ್ಮ್ ದಕ್ಷಿಣದ ಕಡೆಗೂ ಬೀಸುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ. ಸದ್ಯದ ಮಾಹಿತಿಯಂತೆ ಮಾರ್ಚ್‌ ಮೂರನೇ ವಾರದವರೆಗೆ ಗರಿಷ್ಠ ಉಷ್ಣಾಂಶ ಇದೇ ರೀತಿ ಇರಲಿದೆ. ಕರಾವಳಿಯಲ್ಲಿ ವಾಡಿಕೆ ಅಥವಾ ಅದಕ್ಕಿಂತ ಒಂದೆರಡು ಡಿ.ಸೆ. ಹೆಚ್ಚಿನ ತಾಪಮಾನ ದಾಖಲಾಗಲಿದ್ದು, ಬಳಿಕ ಪೂರ್ವ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಹವಾಮಾನ ಇಲಾಖೆ ತಜ್ಞರು. ಕರಾವಳಿಯಲ್ಲಿ ಕಳೆದ ಕೆಲವು ದಿನಗಳಲ್ಲಿ ಬೆಳಗ್ಗೆ ಮಂಜು ಕವಿದಿರುತ್ತದೆ. ಆದರೆ ಸೂರ್ಯ ನೆತ್ತಿಗೇರುತ್ತಿದ್ದಂತೆ, ಸುಡು ಬಿಸಿಲು ಆವರಿಸಿ, ಹೊರಾಂಗಣದಲ್ಲಿ ಕೆಲಸ ಮಾಡುವವರನ್ನು ಬೆವರಿಳಿಸಿ ಬಿಡುತ್ತದೆ. ಮಂಗಳೂರಿನಲ್ಲಿ ಸದ್ಯದ ತಾಪಮಾನ ಗರಿಷ್ಠ 33 ಮತ್ತು ಕನಿಷ್ಠ 25 ಇದೆ. ಮಾ.15ರ ವೇಳೆಗೆ ತಾಪಮಾನ ಇನ್ನಷ್ಟು ಹೆಚ್ಚಲಿದೆ. ಗರಿಷ್ಠ 34 ಮತ್ತು ಕನಿಷ್ಠ 26ಕ್ಕೇರಲಿದೆ. ಕರಾವಳಿಯ ಇತರ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದ್ದರೂ, ತೇವಾಂಶ ಹೆಚ್ಚಿದೆ. ಸೆಕೆ ಕಾಡುತ್ತಿದೆ. ಕಟ್ಟಡ, ಕೂಲಿ ಕಾರ್ಮಿಕರು, ಸೆಂಟ್ರಿಂಗ್‌ ಕೆಲಸ ಮಾಡುವವರು ಸೇರಿದಂತೆ ಹೊರಾಂಗಣದಲ್ಲಿ ಕೆಲಸ ಮಾಡುವವರು ಬಿಸಿಲ ಬೇಗೆಗೆ ತತ್ತರಿಸುತ್ತಿದ್ದಾರೆ. ಜಾನುವಾರು, ಪ್ರಾಣಿ ಪಕ್ಷಿಗಳೂ ನೆರಳು, ನೀರಿನ ಆಸರೆಯನ್ನು ಬಯಸುತ್ತಿವೆ. ನೀರಿನ ಮೂಲಗಳು ಬತ್ತುತ್ತಿವೆ. ಹೀಗೆಯೇ ಆದರೆ, ಮುಂದಿನ ತಿಂಗಳಲ್ಲಿ ಬಹಳಷ್ಟು ಕಡೆಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಬರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಕೆಲವೆಡೆ ಕಾಡ್ಗಿಚ್ಚು ಕಾಣಿಸುತ್ತದೆ. ಈ ಬಾರಿ ಜನವರಿ, ಫೆಬ್ರವರಿಯಲ್ಲೇ ಅತಿಯಾದ ಬಿಸಿಲಿನಿಂದ ಚಾರ್ಮಾಡಿಯಲ್ಲಿ ಕಾಡ್ಗಿಚ್ಚು ಕಾಣಿಸಿದೆ. ಎರಡು ವರ್ಷ ಹಿಂದಿನ ಭೂ ಕುಸಿತದ ಪರಿಣಾಮ ಕಾಡಿನ ಹಸಿರ ಹೊದಿಕೆ ಕಡಿಮೆಯಾಗಿ, ನೀರಿನ ಒರತೆ ಇಲ್ಲದೆ, ಕಲ್ಲುಗಳು ಕಾಣಿಸಿಕೊಂಡು ಬಿಸಿ ತಾಪ ಹೆಚ್ಚುತ್ತಿದೆ. ಇದರಿಂದ ಕಾಡ್ಗಿಚ್ಚು ಹಬ್ಬುತ್ತಿದೆ ಎನ್ನುತ್ತಾರೆ ಪರಿಸರ ಹೋರಾಟಗಾರ ದಿನೇಶ್‌ ಹೊಳ್ಳ ಕೋವಿಡ್‌ನಿಂದ ಕಳೆದೆರಡು ವರ್ಷ ವಿದ್ಯಾರ್ಥಿಗಳಿಗೆ ಬಿಸಿಲ ಬೇಗೆಯಿಂದ ಮುಕ್ತಿ ಸಿಕ್ಕಿತ್ತು. ಆದರೇ ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಆದರೆ ಈ ವರ್ಷದ ಬೇಸಿಗೆ ವಾಡಿಕೆಗಿಂತ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು ಇಲ್ಲಿನ ಜನರಿಗೆ ಒಂದಷ್ಟು ಖುಷಿ ತಂದಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ