ನವದೆಹಲಿ: ಕಳೆದ ವರ್ಷ ಕೊಯಮತ್ತೂರು ಮತ್ತು ಮಂಗಳೂರಿನಲ್ಲಿ ನಡೆದ ಸ್ಫೋಟಗಳ ಹೊಣೆಯನ್ನು ಖೊರಾಸಾನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ (ಐಎಸ್‌ಕೆಪಿ) ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದ್ದು, ವಿಶ್ವಸಂಸ್ಥೆ ಘೋಷಿತ ಭಯೋತ್ಪಾದಕ ಸಂಘಟನೆಯಾದ ಐಎಸ್‌ಕೆಪಿಯ ನಿಯತಕಾಲಿಕ ‘ವಾಯ್ಸ್ ಆಫ್ ಖುರಾಸನ್’ ನ 68 ಪುಟಗಳ ಇತ್ತೀಚಿನ ಸಂಚಿಕೆಯನ್ನು ಅಲ್-ಅಜೈಮ್ ಮೀಡಿಯಾ ಫೌಂಡೇಶನ್ (ISKPಗೆ ಸೇರಿದ ಸಂಸ್ಥೆ) ಶನಿವಾರ ಬಿಡುಗಡೆ ಮಾಡಿದೆ. ಈ ಸಂಚಿಕೆಯಲ್ಲಿ ಕೊಯಮತ್ತೂರು ಮತ್ತು ಮಂಗಳೂರಿನಲ್ಲಿ ಸ್ಫೋಟಗಳನ್ನು ನಡೆಸಿದ್ದು ನಾವೇ ಎಂಬುದನ್ನು ಐಎಸ್‌ಕೆಪಿ ಹೇಳಿದೆ. ‘ವಾಯ್ಸ್ ಆಫ್ ಖುರಾಸನ್’ – ಇದು ಮಧ್ಯ ಹಾಗೂ ದಕ್ಷಿಣ ಏಷ್ಯಾದಲ್ಲಿ ಐಸಿಸ್ ಚಟುವಟಿಕೆಯನ್ನು ಉತ್ತೇಜಿಸುವ ನಿಯತಕಾಲಿಕೆಯಾಗಿದೆ. ತಮಿಳುನಾಡಿನ ಕೊಯಮತ್ತೂರು ಮತ್ತು ಕರ್ನಾಟಕದ ಮಂಗಳೂರಿನಲ್ಲಿ ದಾಳಿ ನಡೆಸಿದ್ದು ತಾವು ಎಂದು ನಿಯತಕಾಲಿಕದಲ್ಲಿ ಬರೆಯಲಾಗಿದೆ. ಆದರೆ ಇಲ್ಲಿ ಮಂಗಳೂರು ಬದಲಿಗೆ ಬೆಂಗಳೂರು ಎಂದು ಬರೆಯಲಾಗಿದೆ. ಉದ್ದೇಶಪೂರ್ವಕವಾಗಿ ಬೆಂಗಳೂರು ಎಂದು ಬರೆಯಲಾಗಿದೆಯೇ ಅಥವಾ ಟೈಪಿಂಗ್ ದೋಷವೇ ಎಂಬುದು ಸ್ಪಷ್ಟವಾಗಿಲ್ಲ. (2022) ಅಕ್ಟೋಬರ್ 23 ರಂದು ಕೊಯಮತ್ತೂರಿನಲ್ಲಿ ಕಾರು ಸ್ಫೋಟ ಹಾಗೂ ನವೆಂಬರ್ 19 ರಂದು ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಕುಕ್ಕರ್ ಸ್ಫೋಟಿಸಿತ್ತು. ಪ್ರಕರಣಗಳ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈಗಾಗಲೇ ಹಲವಾರು ಐಸಿಸ್ ಶಂಕಿತರನ್ನು ಬಂಧಿಸಿದ್ದಾರೆ.

Advertisement
Advertisement