ಮಂಗಳವಾರ ಅಫ್ಘಾನಿಸ್ತಾನದಲ್ಲಿ 6.6 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ ಬಳಿಕ ರಾತ್ರಿ 10.20ರ ವೇಳೆಗೆ ದೆಹಲಿ-ಎನ್‌ಸಿಆರ್ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಭೂಕಂಪ ಸಂಭವಿಸಿದೆ. ಒಂದು ನಿಮಿಷಕ್ಕೂ ಹೆಚ್ಚು ಕಾಲ ಭೂಮಿ ಕಂಪಿಸಿದ್ದು, ಭಯಭೀತರಾದ ಜನರು ತಮ್ಮ ಮನೆಗಳಿಂದ ಹೊರಗಡೆ ಓಡಿ ಬಂದಿರುವ ದೃಶ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವರದಿಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿನ ಪ್ರಬಲ ಭೂಕಂಪದ ನಂತರ ತುರ್ಕಮೆನಿಸ್ತಾನ್, ಭಾರತ, ಕಜಕಿಸ್ತಾನ್, ಪಾಕಿಸ್ತಾನ, ತಜಕಿಸ್ತಾನ್, ಉಜ್ಬೇಕಿಸ್ತಾನ್, ಚೀನಾ, ಮತ್ತು ಕಿರ್ಗಿಸ್ತಾನ್ ದೇಶಗಳಲ್ಲಿನ ಕೆಲವು ಭಾಗಗಳಲ್ಲಿ ಭೂಕಂಪದ ಅನುಭವವಾಗಿದೆ. ಭಾರತದಲ್ಲಿ ದೆಹಲಿ-ಎನ್‌ಸಿಆರ್ ಪ್ರದೇಶ, ಉತ್ತರ ಪ್ರದೇಶ. ಪಂಜಾಬ್, ಹರಿಯಾಣ, ಚಂಡೀಗಢ, ಹಿಮಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರದ ಕೆಲವೆಡೆ ದಲ್ಲಿ ಭೂಮಿ ಕಂಪಿಸಿದೆ. ದೆಹಲಿಯಲ್ಲಿ 4.4ರ ತೀವ್ರತೆಯಲ್ಲಿ ಭೂಮಿ ಕಂಪಿಸಿರುವುದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಕಲಾಫ್ಗಾನ್ನಿಂದ 90 ಕಿ.ಮೀ ದೂರದಲ್ಲಿತ್ತು. ಪಾಕಿಸ್ತಾನದಲ್ಲಿ 6.8 ತೀವ್ರತೆಯ ಭೂಕಂಪಕ್ಕೆ ಇಬ್ಬರು ಮತ್ತು ಅಫ್ಘಾನಿಸ್ತಾನದಲ್ಲಿ 6.6 ರಷ್ಟು ತೀವ್ರತೆಯ ಭೂಕಂಪಕ್ಕೆ 7 ಮಂದಿ ಸೇರಿ ಭೂಕಂಪಕ್ಕೆ 9 ಮಂದಿ ಸಾವನ್ನಪ್ಪಿದ್ದಾರೆ.

ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ವಾತ್ ಕಣಿವೆ ಪ್ರದೇಶದಲ್ಲಿ 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪಾಕಿಸ್ತಾನದ ತುರ್ತು ಸೇವೆಗಳ ವಕ್ತಾರ ಬಿಲಾಲ್ ಫೈಜಿ ತಿಳಿಸಿದ್ದಾರೆ.