ಸುಳ್ಯ: ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಸುಳ್ಯ ತಾಲೂಕು ಮಾತ್ರವಲ್ಲದೆ ದಕ್ಷಿಣ ಕನ್ನಡ ಲ, ಕೊಡಗು ಜಿಲ್ಲೆಯ ಅನೇಕರಿಗೆ ಪ್ರೀತಿ ಪಾತ್ರರಾಗಿದ್ದ, ಆಸ್ಪತ್ರೆಗೆ ಬರುವ ಪ್ರತಿಯೊಂದು ರೋಗಿಗಳಿಗೆ ವಿಶೇಷ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ ಸುಳ್ಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ತಜ್ಞರಾದ ಡಾ.ಹಿಮಕರ ಕೆ.ಎಸ್.ಅವರು ಸರಕಾರಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಇವರು ಸತತ 30 ವರ್ಷಗಳ ಕಾಲ ತನ್ನ ಸರಕಾರಿ ಸೇವೆಗೆ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ.

ಇನ್ನೂ ಕೇವಲ 6 ವರ್ಷಗಳ ಸೇವಾ ಅವಧಿ ಉಳಿದಿರುವಂತೆಯೇ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಡಾ.ಹಿಮಕರ ಅವರು 1993ರಲ್ಲಿ ವೈದ್ಯರಾಗಿ ಸರಕಾರಿ ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ ಕೀರ್ತಿ ಇವರದು. ಬಳಿಕ ಕೆಎಂಸಿಯಲ್ಲಿ ವೈದ್ಯಕೀಯ ಪಿಜಿ ಪಡೆದರು. ಬಳಿಕ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿಯೂ ವೈದ್ಯರಾಗಿ ಸೇವೆ ಸಲ್ಲಿಸಿದರು. ತದನಂತರ ಸುಳ್ಯ ಸಾರ್ವಜನಿಕ ಆಸ್ಪತ್ರೆಗೆ ಬಂದು ಕಳೆದ 10 ವರ್ಷಗಳಿಂದೀಚೆಗೆ ಸೇವೆ ಸಲ್ಲಿಸಿ ಸೇವೆಯಲ್ಲಿ ಸುಳ್ಯ ಜನರ ಮನಸ್ಸನ್ನೇ ಗೆದ್ದಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಅವರು ಸ್ವಯಂ ನಿವೃತ್ತಿ ಬಯಸಿ ಅರ್ಜಿ ಸಲ್ಲಿಸಿದ್ದು ಇದೀಗ ಸರಕಾರ ಅವರಿಗೆ ಸ್ವಯಂ ನಿವೃತ್ತಿ ನೀಡಿದೆ. ಸರಕಾರಿ ಸೇವೆಯಿಂದ ನಿವೃತ್ತರಾದರೂ ಸುಳ್ಯದ ಖಾಸಗಿ ಕ್ಲಿನಿಕ್ ನಲ್ಲಿ ಜನರ ಸೇವೆಗೆ ಲಭ್ಯವಿರುತ್ತೇನೆ ಎಂದು ಡಾ.ಹಿಮಕರ ಅವರು ತಿಳಿಸಿದ್ದಾರೆ.