ಮಂಡ್ಯದಲ್ಲಿ ವಿಧಾನಸಭೆ ಚುನಾವಣೆ (Assembly Election) ಅಖಾಡ ರಂಗೇರಿದೆ. ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡಲು ಕಾಂಗ್ರೆಸ್, ಬಿಜೆಪಿ ರಣತಂತ್ರ ರೂಪಿಸಿದೆ. ಸಕ್ಕರೆ ನಾಡಿನ ಜನರ ಅಕ್ಕರೆ ಗಳಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕರೇ ಅಖಾಡಕ್ಕಿಳಿದ್ದಿದ್ದಾರೆ. ಇಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಂಡ್ಯಗೆ ಭೇಟಿ ನೀಡಿದ್ರು. ಸರ್ಕಾರಿ ಮಹಿಳಾ ಕಾಲೇಜು ಆವರಣದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಪ್ರಿಯಾಂಕಾ ಗಾಂಧಿ (Priyanka Gandhi) ಆಗಮನದ ಹಿನ್ನೆಲೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಕೂಡ ಆಗಮಿಸಿದ್ರು. ಅಂದು ಮಂಡ್ಯ (Mandya) ನೆಲದಲ್ಲಿ ನಿಂತು ಲೋಕಸಭೆ ಚುನಾವಣೆಯಲ್ಲಿ ಗೆದ್ದು ಡೆಲ್ಲಿ ಸಂಸತ್ ಭವನದ ಮೆಟ್ಟಿಲು ಹತ್ತಿದ ರಮ್ಯಾ (Ramya), ಬಹಳ ವರ್ಷಗಳ ಬಳಿಕ ಮತ್ತೆ ಸಕ್ಕರೆ ನಾಡಿಗೆ ಕಾಲಿಟ್ಟಿದ್ದಾರೆ. ರಮ್ಯಾ ನೋಡಿ ಜನರ ಆಕ್ರೋಶ ಕಟ್ಟೆ ಹೊಡೆದಿದೆ. ರಮ್ಯಾ ವಿರುದ್ದ ಅಂಬರೀಶ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಚುನಾವಣೆಯಲ್ಲಿ ಸೋತ ಬಳಿಕ ಕಣ್ಮರೆಯಾಗಿದ್ದ ರಮ್ಯಾ, ಇದೀಗ ವೋಟ್ ಕೇಳಲು ಬರ್ತಿದ್ದಾರೆ ಎಂದು ಅಂಬಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ರು. ಅಂಬರೀಶ್ ನಿಧನರಾದಾಗ ಬರಲಿಲ್ಲ, ಜಿ ಮಾದೇಗೌಡ ನಿಧನರಾದಾಗಲೂ ಬರಲಿಲ್ಲ, ಮಂಡ್ಯ ಜನ ಸಂಕಷ್ಟದಲ್ಲಿದ್ದಾಗ ಅವ್ರ ಕಷ್ಟ ಕೇಳಲಿಲ್ಲ. ಈಗ ಯಾವ ನೈತಿಕತೆ ಇಟ್ಟುಕೊಂಡು ಮತಯಾಚನೆ ಮಾಡಲು ಬಂದಿದ್ದಾರೆ ಎಂದು ರಮ್ಯಾ ವಿರುದ್ಧ ಅಂಬರೀಶ್ ಅಭಿಮಾನಿಗಳು ಕಿಡಿಕಾರಿದ್ರು
ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಿ ಮಾತಾಡಿದ ರಮ್ಯಾ, ಮಂಡ್ಯ ಜನರ ಪ್ರಶ್ನೆಗಳಿಗೆ ಕೊನೆಗೂ ಉತ್ತರ ನೀಡಿದ್ದಾರೆ. ಮಂಡ್ಯದ ಜನರ ಜೊತೆ ಸಂಪರ್ಕ ಕಳೆದುಕೊಂಡಿಲ್ಲ. ನಾನು ಮಂಡ್ಯಕ್ಕೆ ಆಗಾಗ ಬಂದು ಹೋಗ್ತಿದ್ದೆ. ಮೊನ್ನೆಯಷ್ಟೇ ನಿಮಿಷಾಂಭ ದೇಗುಲಕ್ಕೆ ಬಂದಿದ್ದೆ. ಕ್ಯಾಮರಾ ಮುಂದೆ ಕಾಣಿಸಿಕೊಂಡಿಲ್ಲ ಅಷ್ಟೇ, ಚುನಾವಣೆಗೆ ನಿಲ್ಲುವ ಯಾವುದೇ ನಿರ್ಧಾರ ನಾನು ಮಾಡಿಲ್ಲ. ಇವತ್ತು ನಾನು ಸ್ಟಾರ್ ಕ್ಯಾಂಪೇನರ್ ಆಗಿ ನಮ್ಮ ಅಭ್ಯರ್ಥಿಗಳಿಗೆ ಸಪೋರ್ಟ್ ಮಾಡಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ರು.

ನನಗೆ ಟ್ಯೂಮರ್ ಸರ್ಜರಿ ಆಗಿತ್ತು-ರಮ್ಯಾ
ಅಂಬರೀಶ್ ನಿಧನರಾದಾಗ ಬಂದಿಲ್ಲ ಎಂದು ಅನೇಕರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಆದ್ರೆ ಅವ್ರು ತೀರಿಕೊಂಡಾಗ ನನಗೆ ಟ್ಯೂಮರ್ ಬಂದಿತ್ತು ಸರ್ಜರಿ ಮಾಡಿಸಿಕೊಂಡಿದ್ದೆ. ಅದರಿಂದ ನಾನು ಅವರ ಅಂತಿಮ ದರ್ಶನಕ್ಕೆ ಬರಲಾಗಲಿಲ್ಲ. ಎಲ್ಲವನ್ನೂ ಕ್ಯಾಮೆರಾ ಮುಂದೆ ಹಂಚಿಕೊಳ್ಳುವ ಸ್ವಭಾವ ನನ್ನದಲ್ಲ, ನಾನು ಚಿಕ್ಕವಳಿದ್ದಾಗಿನಿಂದ ನನ್ನ ಕೆಲಸದಿಂದಲೇ ಮಾತನಾಡ್ತೀನಿ. ಯಾವುದೇ ವೈಯಕ್ತಿಕ ವಿಚಾರ ಮಾತಾಡಲ್ಲ ಎಂದು ರಮ್ಯಾ ಸ್ಪಷ್ಟನೆ ನೀಡಿದ್ರು. ನನ್ನ ಬಗ್ಗೆ ಕೆಲವರು ಅಪಪ್ರಚಾರ ಮಾಡ್ತಾರೆ ಆದ್ರೆ ನಾನು ತಲೆಕೆಡಿಸಿಕೊಳ್ಳಲ್ಲ. ಸರ್ಜರಿ ಆದ ಬಳಿಕ ನನಗೆ ಆಟೋ ಇಮ್ಯೂನ್ ಕಂಡಿಷನ್ ಕೂಡ ಆಯ್ತು. ಇದನ್ನೆಲ್ಲಾ ಹೇಳಿ ಸಿಂಪತಿ ಪಡೆಯಲು ನಂಗಿಷ್ಟ ಇಲ್ಲಾ. ಸದ್ಯಕ್ಕೆ ನಾನು ಸಕ್ರಿಯ ರಾಜಕಾರಣಕ್ಕೆ ಬರುವ ಚಿಂತನೆ ಮಾಡಿಲ್ಲ ಮುಂದೆ ನೋಡೋಣ ಎಂದ್ರು. ನಾನು ಸದ್ಯಕ್ಕೆ ಸಿನಿಮಾದಲ್ಲಿ ಪ್ರೊಡಕ್ಷನ್ ಮಾಡ್ತಿದ್ದೇನೆ ಅಷ್ಟೇ. ಚುನಾವಣೆಯಲ್ಲಿ ಸೋತ ಬಳಿಕ ರಮ್ಯಾ ಮಂಡ್ಯ ಖಾಲಿ ಮಾಡಿದ್ರು ಎನ್ನುವ ಆರೋಪಕ್ಕೂ ಕೂಡ ರಮ್ಯಾ ಪ್ರತಿಕ್ರಿಯಿಸಿದ್ದಾರೆ. ಹಿಂದೆ ಮಂಡ್ಯ ಜನಕ್ಕೆ ತೊಟ್ಟಿ ಮನೆ ಮಾಡಿ ಇಲ್ಲೆ ಇರ್ತಿನಿ ಎಂಬ ಭರವಸೆ ನೀಡಿದ್ದೆ. ಮಂಡ್ಯದ ಗೋಪಾಲಪುರದಲ್ಲಿ ನಮ್ಮ ತಾತನ ತೊಟ್ಟಿ ಮನೆ ಇದೆ. ನಾನೊಂದು ತೊಟ್ಟಿ ಮನೆ ಮಾಡಬೇಕು ಎಂಬ ಆಸೆ ಈಗಲೂ ಇದೆ, ಆದ್ರೆ ಅದು ಯಾವಾಗ ಈಡೇರುತ್ತೆ ಗೊತ್ತಿಲ್ಲ. ನಾನು ಯಾವಾಗಲೂ ಗೌಡ್ತಿನೆ ಇದನ್ನೂ ಯಾರಿಂದಲೂ ಕಿತ್ತುಕೊಳ್ಳಲು ಆಗಲ್ಲ ಎಂದಿದ್ದಾರೆ.