ಲಖನೌ: ಆಸ್ಪತ್ರೆಗೆ ಬೆಂಕಿ ಬಿದ್ದಿಗೆ ಎಂದು ತಿಳಿದಕೂಡಲೇ ಎನ್‌ಐಸಿಯುಗೆ ನುಗ್ಗಿ 16 ನವಜಾತ ಶಿಶುಗಳನ್ನು ರಕ್ಷಿಸಿದ ವ್ಯಕ್ತಿಯೊಬ್ಬ ತನ್ನ ಅವಳಿ ಮಕ್ಕಳನ್ನೇ ರಕ್ಷಿಸಿಕೊಳ್ಳಲಾಗಿಲ್ಲ! ಇಂತಹದೊಂದು ಹೃದಯವಿದ್ರಾವಕ ಘಟನೆಯು ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ಮೆಡಿಕಲ್ ಕಾಲೇಜಿನಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಬೆಂಕಿಯು ನವಜಾತ ಶಿಶುಗಳ ವಿಭಾಗಕ್ಕೆ (ಎನ್‌ಐಸಿಯು) ವ್ಯಾಪಿಸಿ 10 ಶಿಶುಗಳನ್ನು ಬಲಿ ಪಡೆದಿದೆ. ಈ ನಡುವೆ ಸುಮಾರು 16 ಶಿಶುಗಳನ್ನು ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಕುಲದೀಪ್ ಎಂಬಾತನಿಗೆ 10 ದಿನಗಳ ಮುನ್ನ ಅದೇ ಆಸ್ಪತ್ರೆಯಲ್ಲಿ ಜನಿಸಿದ್ದ ತನ್ನ ಅವಳಿ ಮಕ್ಕಳನ್ನು ರಕ್ಷಿಸಿಕೊಳ್ಳಲಾಗಲಿಲ್ಲ.
ಕಣ್ಣೀರಿಟ್ಟ ದಂಪತಿ
ಮಹೊಬಾ ನಿವಾಸಿ ಕುಲದೀಪ್ ಅವರು ತನ್ನ ಅವಳಿ ಮಕ್ಕಳನ್ನು ಝಾನ್ಸಿ ಆಸ್ಪತ್ರೆಗೆ ಕರೆತಂದಿದ್ದರು. ಮಗುವನ್ನು ಎನ್‌ಐಸಿಯುದಲ್ಲಿ ಮಲಗಿಸಿ ಲಾಬಿಯಲ್ಲಿ ಕುಳಿತಿದ್ದಾಗ ಅಗ್ನಿ ಅವಘಡ ಸಂಭವಿಸಿತು. ಕೂಡಲೇ ವಾರ್ಡ್ ಒಳಗೆ ನುಗ್ಗಿ ಕೈಗಳನ್ನು ಸುಟ್ಟುಕೊಂಡು ಶಿಶುಗಳನ್ನು ರಕ್ಷಿಸಿದ ಕುಲದೀಪ್‌ಗೆ ಕೊನೆಯಲ್ಲಿ ತನ್ನ ಮಗುವಿನ ರಕ್ಷಣೆ ಮಾತ್ರ ಸಾಧ್ಯವಾಗಲೇ ಇಲ್ಲ. ತಮ್ಮ ದುರಾದೃಷ್ಟವನ್ನು ಸ್ಮರಿಸಿ ಕುಲದೀಪ್ ಹಾಗೂ ಅವರ ಪತ್ನಿ ಗಳಗಳನೆ ಅಳುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿವೈರಲ್ ಆಗಿವೆ. ಇದೇ ರೀತಿ, ಮಂಗಲ್ ಸಿಂಗ್ ಹಾಗೂ ಕೃಪಾಲ್ ಸಿಂಗ್ ರಜಪೂತ್ ಕೂಡ ಕ್ರಮವಾಗಿ ಮಗ ಹಾಗೂ ಮೊಮ್ಮಗು ತಮ್ಮ ಕಣ್ಣ ಮುಂದೆಯೇ ಸುಟ್ಟುಹೋಗುವುದನ್ನು ಕಂಡು ಆಘಾತಕ್ಕೀಡಾಗಿದ್ದಾರೆ.