ಬೆಂಗಳೂರು: ಗೃಹ ಲಕ್ಷ್ಮಿ (Gruhalakshmi) ಯೋಜನೆ ವಿಳಂಬ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಮಾತಾಡಿದ್ದಾರೆ. ನಾನೇ ಚೀಫ್ ಮಿನಿಸ್ಟರ್ ಜೊತೆ ಮಾತಾಡಿ ಯೋಜನೆಯನ್ನ ಹೋಲ್ಡ್ ಮಾಡಿಸಿದ್ದೇನೆ ಎಂದು ತಿಳಿಸಿದ್ದಾರೆ. ಗೃಹ ಲಕ್ಷ್ಮಿ ಯೋಜನೆ ಜಾರಿ ವಿಳಂಬ ವಿಚಾರವಾಗಿ ಇಂದು ಡಿಕೆ ಶಿವಕುಮಾರ್ ವಿಧಾನಸೌಧದ ಕಚೇರಿಯಲ್ಲಿ ಸಭೆ ನಡೆಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi hebbalkar ) ಹಾಜರಾಗಿದ್ದರು. ಸಭೆಯ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಭ್ರಷ್ಟಾಚಾರ (Corruption) ರಹಿತವಾಗಿ ಯೋಜನೆ ಅನುಷ್ಠಾನ ಆಗಬೇಕು. ಈ ಸ್ಕೀಮ್ ಗಳಲ್ಲಿ ಯಾರೂ ಕೂಡ ಒಬ್ಬರಿಗೆ ಲಂಚ ಕೊಡಬಾರದು. ಅದಕ್ಕೆ ಸ್ವಲ್ಪ ತಡವಾಗ್ತಿದೆ ಎಂದಿದ್ದಾರೆ.
ಪವರ್ ಮಿನಿಸ್ಟರ್ ಆಗಿದ್ದವನು ನನಗೆ ಎಲ್ಲವೂ ಗೊತ್ತಿದೆ
ಇದೇ ವೇಳೆ ಗೃಹ ಜ್ಯೋತಿ ಅಲ್ಲ ಸುಡುವ ಜ್ಯೋತಿ ಅಂತಾ ಹೇಳಿಕೆ ಕೊಟ್ಟಿದ್ದ ಮಾಜಿ ಸಿಎಂ ಹೆಚ್ಡಿಕೆಗೆ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ. ನಾವು ಎಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದೀವಿ? ರಿಸಲ್ಟ್ ಬರೋಕೆ ಮುಂಚೆಯೇ ಅವರು ಜಾಸ್ತಿ ಮಾಡಿದ್ದಾರೆ. ನಿಮ್ಮ ಕಾಲದಲ್ಲೇ ಸಾವಿರಾರು ಕೋಟಿ ಜಾಸ್ತಿ ಮಾಡಿದ್ದಾರೆ. ಇದು ಕುಮಾರಸ್ವಾಮಿಗೆ ಗೊತ್ತಿಲ್ಲದೇ ಇರಬಹುದು. ಆದರೆ ನಾನೊಬ್ಬ ಪವರ್ ಮಿನಿಸ್ಟರ್ ಆಗಿದ್ದವನು ನನಗೆ ಎಲ್ಲವೂ ಗೊತ್ತಿದೆ ಅಂತಾ ಹೇಳಿದ್ದಾರೆ.