Advertisement
ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನವರಾದ ರಾಯಚೂರು ನಗರ ಅಭಿವೃದ್ಧಿ ಕೋಶದ ಯೋಜನಾ ಶಾಖೆಯ ಸಹಾಯಕ ನಿರ್ದೇಶಕ ಶರಣಪ್ಪ ಮಡಿವಾಳರ್ ಮಾಲೀಕತ್ವದ ಫಾರ್ಮ್ ಹೌಸ್ ಹಾಗೂ ಮನೆಗಳ ಮೇಲೆ ಇಂದು(ಬುಧವಾರ) ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ನಗರದ ನಾಗನಹಳ್ಳಿ-ಖಣದಾಳ ರಸ್ತೆಯಲ್ಲಿರುವ ಫಾರ್ಮ್ ಹೌಸ್ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿರುವ ಕಚೇರಿ ಮತ್ತು ಮನೆಯ ಮೇಲೆ ದಾಳಿ ನಡೆದಿದೆ ಎಂದು ಮಾಹಿತಿ ಲಭಿಸಿದೆ. ಶರಣಪ್ಪ ಹಲವು ವರ್ಷಗಳಿಂದ ರಾಯಚೂರು ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಆದಾಯ ಮೀರಿ ಅಧಿಕ ಆಸ್ತಿ ಗಳಿಸಿದ ಆರೋಪ ಅವರ ಮೇಲಿತ್ತು. ಹೀಗಾಗಿ ದೂರು ದಾಖಲಿಸಿಕೊಳ್ಳಲಾಗಿದೆ. ಕಲಬುರಗಿ ಲೋಕಾಯುಕ್ತ ಎಸ್ಪಿ ಎಆರ್ ಕರ್ನೂಲ್ ನೇತೃತ್ವದಲ್ಲಿ ಪೊಲೀಸರು ಕಲಬುರಗಿಯ ಫಾರ್ಮ್ ಹೌಸ್‌ನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಫಾರ್ಮ್ ಹೌಸ್‌ನಲ್ಲಿರುವ ಸಿಬ್ಬಂದಿ ಮಾಹಿತಿ ನೀಡುತ್ತಿದ್ದು, ಆಸ್ತಿ ದಾಖಲೆಗಳ ಪರಿಶೀಲನೆ ನಡೆದಿದೆ.
Advertisement