Advertisement

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕಾರ್ಡುದಾರರಿಗೆ ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಉಚಿತ ಅಕ್ಕಿಯ ಬದಲಿಗೆ ತಮ್ಮ ಸರ್ಕಾರ ಜುಲೈ 10 ರಿಂದ ಹಣವನ್ನು ವಿತರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜುಲೈ ತಿಂಗಳಿನಲ್ಲಿ ಅಕ್ಕಿ ಬದಲು ಹಣ ನೀಡುತ್ತೇವೆ ಎಂದು ಹೇಳಿದ್ದೆವು. ಆದರೆ ಜುಲೈ 1 ರಂದು ಸರ್ಕಾರ ಕೊಡುತ್ತದೆ ಎಂದು ಹೇಳಿಲ್ಲ, ಜುಲೈ 10 ರಿಂದ ಅಕ್ಕಿ ಬದಲಿಗೆ ಹಣ ನೀಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಈ ಪೈಕಿ ಅನ್ನಭಾಗ್ಯ ಯೋಜನೆಯೂ ಒಂದಾಗಿತ್ತು. ಅನ್ನಭಾಗ್ಯ ಯೋಜನೆಯಡಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಪ್ರತಿ ವ್ಯಕ್ತಿಗೆ 10 ಕಿಲೋ ಗ್ರಾಂ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು.

ಆದರೆ ಕರ್ನಾಟಕ ಸರ್ಕಾರವು ಹೆಚ್ಚಿನ ಪ್ರಮಾಣದ ಅಕ್ಕಿಯನ್ನು ಸಂಗ್ರಹಿಸಲು ತೊಂದರೆಯನ್ನು ಎದುರಿಸುತ್ತಿರುವ ಕಾರಣ, ಅನ್ನಭಾಗ್ಯ ಯೋಜನೆಯಡಿ ಭರವಸೆaಯಂತೆ ಫಲಾನುಭವಿಗಳಿಗೆ 5 ಕೆಜಿ ಹೆಚ್ಚುವರಿ ಅಕ್ಕಿಯನ್ನು ನೀಡುವ ಬದಲು, ಪ್ರತಿ ಕಿಲೋಗೆ 34 ರೂಪಾಯಿಯಂತೆ ನಗದು ನೀಡಲು ನಿರ್ಧರಿಸಿದೆ.

ಈ ವಾರದ ಆರಂಭದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರವು ಅಕ್ಕಿ ಖರೀದಿಸಲು ಸಾಧ್ಯವಾಗುವವರೆಗೆ 5 ಕೆಜಿ ಹೆಚ್ಚುವರಿ ಅಕ್ಕಿಯ ಬದಲು ಒಂದು ಕೆಜಿ ಅಕ್ಕಿಗೆ 34 ರೂಪಾಯಿಯಂತೆ, ಮನೆಯಲ್ಲಿ ಎಷ್ಟು ಜನರಿದ್ದಾರೆ ಲೆಕ್ಕ ಹಾಕಿ ಹಣ ಕೊಡುವುದಾಗಿ ಸಿದ್ದರಾಮಯ್ಯ ನಿರ್ಧರಿಸಿದ್ದರು.

ಕೇಂದ್ರ ಸರ್ಕಾರ ನಮಗೆ ಸಹಕರಿಸಿಲ್ಲ. ಬಡವರಿಗೆ ಅಕ್ಕಿ ಕೊಡುವುದರಲ್ಲಿ ರಾಜಕೀಯ ಮಾಡಿದೆ. 15 ಲಕ್ಷ ಟನ್‌ನಷ್ಟು ಅಕ್ಕಿಯನ್ನು ಮುಕ್ತ ಟೆಂಡರ್‌ ಮೂಲಕ ಕೆಜಿಗೆ 31 ರೂಪಾಯಿಯಂತೆ ಕೊಟ್ಟಿದ್ದಾರೆ. ನಾವು 34 ರೂಪಾಯಿ ಕೊಡುತ್ತೇವೆ ಎಂದರೂ ಸ್ಪಂದಿಸಲಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ಬದಲಿ ಯೋಚನೆ ಮಾಡಬೇಕಾಯಿತು. ಕೇಂದ್ರದ ಅಧೀನದಲ್ಲಿರುವ ಸಂಸ್ಥೆಗಳು ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಹೀಗಾಗಿ ಕೇಂದ್ರ ಗೋದಾಮು ನಿಗಮವು ಒಂದು ಕೆಜಿ ಅಕ್ಕಿಗೆ ನಿಗದಿಪಡಿಸಿರುವ 34 ರೂಪಾಯಿ ಮೊತ್ತವನ್ನು ಜನರಿಗೇ ನೇರವಾಗಿ ಹಂಚಿಕೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಆಹಾರ ಸಚಿವ ಮುನಿಯಪ್ಪ ತಿಳಿಸಿದ್ದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ