ನಟ ಸುದೀಪ್ (Kichcha Sudeep) ಅವರು ಸಿನಿಮಾದಲ್ಲಿ ಸಕ್ರಿಯವಾಗಿರುವುದು ಮಾತ್ರವಲ್ಲದೇ ಅನೇಕ ಸಮಾಜಮುಖಿ ಕಾರ್ಯಗಳನ್ನೂ ಮಾಡುತ್ತಾರೆ. ಅದಕ್ಕೆ ಈಗಾಗಲೇ ಅನೇಕ ಉದಾಹರಣೆಗಳು ಸಿಕ್ಕಿವೆ. ಈಗ ಮತ್ತೆ ಅಂಥದ್ದೇ ಘಟನೆ ನಡೆದಿದೆ. ಕ್ಯಾನ್ಸರ್ನಿಂದ (Cancer) ಬಳಲುತ್ತಿರುವ ಸಾಕ್ಷಿ ಎಂಬ ಬಾಲಕಿಯನ್ನು ಸುದೀಪ್ ಅವರು ಭೇಟಿ ಮಾಡಿದ್ದಾರೆ. ಆಕೆಯ ಆರೋಗ್ಯ ವಿಚಾರಿಸಿದ್ದಾರೆ. ಉಡುಗೊರೆ ಮತ್ತು ಆಟೋಗ್ರಾಫ್ ನೀಡುವ ಮೂಲಕ ಆ ಪುಟ್ಟ ಅಭಿಮಾನಿಯ (Sudeep Fan Sakshi) ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ ಕಿಚ್ಚ ಸುದೀಪ್. ಈ ಸಂದರ್ಭದ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕಿಚ್ಚ ಸುದೀಪ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ತಮ್ಮ ನೆಚ್ಚಿನ ನಟನನ್ನು ಒಮ್ಮೆಯಾದರೂ ಭೇಟಿಯಾಗಬೇಕು ಎಂಬುದು ಎಲ್ಲ ಅಭಿಮಾನಿಗಳ ಆಸೆ. ಆದರೆ ಎಲ್ಲರಿಗೂ ಅಂಥ ಅವಕಾಶ ಸಿಗುವುದಿಲ್ಲ. ತಮ್ಮ ವಿಶೇಷ ಅಭಿಮಾನಿಗಳ ಬಗ್ಗೆ ಸುದೀಪ್ ಅವರು ಯಾವಾಗಲೂ ಕಾಳಜಿ ವಹಿಸುತ್ತಾರೆ. ಬಾಲಕಿ ಸಾಕ್ಷಿ ಕೂಡ ಅಂಥ ಓರ್ವ ಅಭಿಮಾನಿ. ಆಕೆಯ ಬಯಕೆಯನ್ನು ತಿಳಿದುಕೊಂಡ ಸುದೀಪ್ ಅವರು ಆಸ್ಪತ್ರೆಗೆ ತೆರಳಿ ಭೇಟಿ ಮಾಡಿದ್ದಾರೆ. ಸಾಕ್ಷಿ ಮತ್ತು ಆಕೆಯ ಕುಟುಂಬದ ಸದಸ್ಯರನ್ನು ಕಿಚ್ಚ ಸುದೀಪ್ ಅವರು ಮಾತನಾಡಿಸಿದ್ದಾರೆ. ಬೆಂಗಳೂರಿನ ‘ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ’ದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸಾಕ್ಷಿಯ ಜೊತೆ ಸುದೀಪ್ ಅವರು ಸಮಯ ಕಳೆದಿದ್ದಾರೆ. ಆಕೆಯ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಒಂದಷ್ಟು ಗಿಫ್ಟ್ಗಳ ಜೊತೆಗೆ ಆಟೋಗ್ರಾಫ್ ನೀಡಿದ್ದಾರೆ. ಇದರಿಂದ ಸಾಕ್ಷಿ ಮುಖದಲ್ಲಿ ನಗು ಮೂಡಿದೆ. ಆಕೆಯ ಬಹುದಿನಗಳ ಕನಸು ನನಸಾಗಿದೆ. ‘ಸುದೀಪ್ ಸರ್ ಎಂದರೆ ನನಗೆ ಬಹಳ ಇಷ್ಟ. ‘ರನ್ನ’ ಚಿತ್ರದ ‘ಥಿತಲಿ..’ ಹಾಡು ನನ್ನ ಫೇವರಿಟ್’ ಎಂದಿದ್ದಾಳೆ ಸಾಕ್ಷಿ. ತನ್ನ ನೆಚ್ಚಿನ ನಟನನ್ನು ಭೇಟಿಯಾಗಿದ್ದಕ್ಕೆ ಸಾಕ್ಷಿಗೆ ತುಂಬ ಖುಷಿ ಆಗಿದೆ. ಕಿಚ್ಚ ಸುದೀಪ್ ಅವರ ಈ ಹೃದಯವಂತಿಕೆಗೆ ಅಭಿಮಾನಿಗಳು ಹ್ಯಾಟ್ಸಾಫ್ ಹೇಳುತ್ತಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಸಿನಿಮಾ ವಿಚಾರಕ್ಕೆ ಬರೋದಾದರೆ ಸುದೀಪ್ ನಟನೆಯ 46ನೇ ಚಿತ್ರದ ಕೆಲಸಗಳು ಆರಂಭ ಆಗಿವೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿ ಗಮನ ಸೆಳೆದಿದೆ.
Advertisement
Advertisement