ಇಂಫಾಲ್(ಜು.21) ಮಣಿಪುರದ ಬೆತ್ತಲೇ ವಿಡಿಯೋ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮಣಿಪುರದೊಳಗೆ ಮತ್ತೆ ಹಿಂಸಾಚಾರ ಶುರುವಾಗಿದ್ದರೆ, ದೇಶ ದ ಮೂಲೆ ಮೂಲೆಯಲ್ಲಿ ಘಟನೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿದೆ. ಈ ಘಟನೆ ಕುರಿತು ಖುದ್ದು ಸಂತ್ರಸ್ತೆ ಪತಿ ಪ್ರತಿಕ್ರಿಯೆ ನೀಡಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ದೇಶದ ಗಡಿಯನ್ನು ಕಾಪಾಡಿದ್ದೆ. ಶ್ರೀಲಂಕಾದಲ್ಲಿ ನಡೆದ  ಭಾರತೀಯ ಸೇನೆಯ ಶಾಂತಿ ಸ್ಥಾಪನೆ ಆಂದೋಲನದಲ್ಲಿ ಭಾಗಿಯಾಗಿ ಸೇವೆ ಸಲ್ಲಿಸಿದ್ದೆ. ಆದರೆ ದೇಶವನ್ನು ಉಳಿಸಿದ ನನಗೆ ನನ್ನ ಪತ್ನಿ, ಮನೆ ಹಾಗೂ ಗ್ರಾಮಸ್ಥರನ್ನು ಕಾಪಾಡಲು ಸಾಧ್ಯವಾಗಲಿಲ್ಲ ಎಂದು ನಿವೃತ್ತ ಯೋಧ ಕಣ್ಣೀರು ಹಾಕಿದ್ದಾರೆ. ಅಸ್ಸಾಂ ರಿಜಿಮೆಂಟ್‌ನಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸಿದ್ದ ಈ ಯೋಧ, ಪಾಕಿಸ್ತಾನ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದರು. ಭಾರತದ ಅಭೂತಪೂರ್ವ ಯುದ್ಧ ಗೆಲುವಿನಲ್ಲಿ ಕಾರ್ಗಿಲ್ ಕೂಡ ಒಂದು. ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಯೋಧ, ತನ್ನ ಪತ್ನಿ, ಮನೆ ಕುಟುಂಬಸ್ಥರನ್ನು ಕಾಪಾಡಲು ಸಾಧ್ಯವಾಗಲಿಲ್ಲ ಅನ್ನೋ ಕೊರಗು ಕಾಡುತ್ತಿದೆ ಎಂದು ನಿವೃತ್ತ ಯೋಧ ಹೇಳಿದ್ದಾರೆ.

ಘಟನೆಗೂ ಮೊದಲು ಪೊಲೀಸರು ಸ್ಥಳದಲ್ಲಿದ್ದರು. ಈ ಘಟನೆಯನ್ನು ತಡೆಯುವ ಎಲ್ಲಾ ಸಾಧ್ಯತೆಗಳು ಪೊಲೀಸ ಕೈಯಲ್ಲಿತ್ತು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಘಟನೆ ಹಿಂದಿರುವ ಎಲ್ಲಾ ದುಷ್ಕರ್ಮಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ನಿವೃತ್ತ ಯೋಧ ಆಗ್ರಹಿಸಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ನಮ್ಮ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮಣಿಪುರದಲ್ಲಿ ನಡೆಯುತ್ತಿರವ ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಅಮಾಯಕರು ಬಲಿಯಾಗಿದ್ದಾರೆ. ಮಹಿಳೆ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳಿಗೆ ಲೆಕ್ಕವೇ ಇಲ್ಲ. ಕಳೆದ 6 ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಆದರೆ ಮಣಿಪುರ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಹಿಂಸಾಚಾರ ನಿಯಂತ್ರಿಸಲು ವಿಫಲಗೊಂಡಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಇದೀಗ ವಿಪಕ್ಷಗಳು ಸೇರಿದಂತೆ ಹಲವು ನಾಯಕರು ಕೇಂದ್ರ ಹಾಗೂ ಮಣಿಪುರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸಮಾಜದ ಸೂಕ್ಷ್ಮತೆಗಳನ್ನು ನಾಶ ಮಾಡುವ ಮೂಲಕ ತಮ್ಮ ಒಟ್ಟಾಡಳಿತದಿಂದ ಪ್ರಜಾಪ್ರಭುತ್ವವನ್ನು ಬದಲಾಯಿಸಿದ್ದಾರೆ. ಭಾರತ ಎಂದಿಗೂ ನಿಮ್ಮ ಮೌನವನ್ನು ಮರೆಯುವುದಿಲ್ಲ. ನಿಮ್ಮಲ್ಲಿ ಏನಾದರೂ ಸೌಜನ್ಯ ಇದ್ದರೆ ಸಂಸತ್ತಿನಲ್ಲಿ ದೇಶದೆದುರು ಮಣಿಪುರದ ಘಟನೆ ಬಗ್ಗೆ ಕಾರಣ ಏನೆಂದು ವಿವರಿಸಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

ಪ್ರಧಾನಿ ಮೋದಿ ಅವರ ಮೌನ ಹಾಗೂ ನಿಷ್ಕ್ರೀಯತೆ ಮಣಿಪುರದಲ್ಲಿ ಅರಾಜಕತೆ ಸೃಷ್ಟಿಸಿದೆ. ‘ಇಂಡಿಯಾ’ ಇದರ ಬಗ್ಗೆ ಮೌನವಾಗಿರುವುದಿಲ್ಲ. ಮಣಿಪುರದಲ್ಲಿ ಇಂಡಿಯಾದ ತತ್ವ ಕ್ಕೆ ಹಾನಿಯಾಗಿದೆ. ನಾವು ಮಣಿಪುರದ ಜನರೊಂದಿಗೆ ಇದ್ದೇವೆ. ಸಮಸ್ಯೆಗೆ ಶಾಂತಿಯೊಂದೇ ಪರಿಹಾರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. 

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ