ಹಾಸನ, ಜುಲೈ 22: ಮಲೆನಾಡು ಭಾಗದಲ್ಲಿ ಭಾರೀ ಮಳೆ ಹಿನ್ನೆಲೆ ಸಕಲೇಶಪುರ ತಾಲೂಕಿನ ಆನೆಮಹಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ (Shiradi Ghat) ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ. ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ತಾಲೂಕಿನಲ್ಲಿ ಭಾರಿ ಮಳೆ ಸುರಿಯುತ್ತಿದೆ. ತಡೆಗೋಡೆ ನಿರ್ಮಾಣ ಮಾಡದೆ ರಸ್ತೆ ಅಗಲೀಕರಣ ಮಾಡಿರುವುದರಿಂದ ಮಣ್ಣು ಕುಸಿದಿದೆ. ಪ್ರತಿನಿತ್ಯ ಶಿರಾಡಿಘಾಟ್ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅವೈಜ್ಞಾನಿಕ ಕಾಮಗಾರಿಯಿಂದ ಸವಾರರಿಗೆ ತೊಂದರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದ್ದು, ದುರಂತ ಸಂಭವಿಸುವುದಕ್ಕೂ ಮುನ್ನ ಸುರಕ್ಷತಾ ಕ್ರಮಕೈಗೊಳ್ಳುವಂತೆ ವಾಹನ ಸವಾರರು ಆಗ್ರಹಿಸಿದ್ದಾರೆ.ಚಿಕ್ಕಮಗಳೂರಿನಲ್ಲಿ ಕೂಡ ಧಾರಾಕಾರ ಮಳೆಯಿಂದ ನದಿಗಳು ಪ್ರವಾಹದ ಮಟ್ಟ ಮೀರಿವೆ. ತುಂಗಾ ಭದ್ರಾ, ಹೇಮಾವತಿ ನದಿಗಳ ಒಳ ಹರಿವಿನಲ್ಲಿ ಹೆಚ್ಚಳವಾಗಿದ್ದು, ಹೆಬ್ಬಾಳೆ ಸೇತುವೆ ಮುಳುಗಡೆಗೆ ಕೆಲವೇ ಅಡಿ ಬಾಕಿಯಿದೆ. ಧಾರಾಕಾರ ಮಳೆ ಮುಂದುವರೆದರೆ ಮೊದಲು ಕಳಸದಿಂದ ಹೊರನಾಡಿಗೆ ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಲಿದೆ. ಕುದುರೆಮುಖ, ಕಳಸ ಭಾಗಗಳಲ್ಲಿಯೂ ಸಹ ಮಳೆ ಸುರಿಯುತ್ತಿದೆ.
Advertisement
Advertisement