Advertisement

ಕಾಸರಗೋಡು, ಜುಲೈ 24: ಕಾಸರಗೋಡಿನ ಪ್ರಸಿದ್ಧ ಪ್ರವಾಸಿ ತಾಣ ಬೇಕಲ ಕೋಟೆಯಲ್ಲಿ (Bekal Fort) ನೈತಿಕ ಪೊಲೀಸ್​ಗಿರಿ (Moral Policing) ನಡೆದಿರುವ ಬಗ್ಗೆ ವರದಿಯಾಗಿದೆ. ಬೇಕಲ ಕೋಟೆಗೆ ತೆರಳಿದ್ದ ಆರು ಮಂದಿಯ ತಂಡದ ಮೇಲೆ ನಾಲ್ವರ ತಂಡವೊಂದು ಹಲ್ಲೆ ನಡೆಸಿದ ಘಟನೆ ಭಾನುವಾರ ಸಂಜೆ ಮೇಲ್ಪರಂಬದಲ್ಲಿ ನಡೆದಿದೆ. ಘಟನೆ ಸಂಬಂಧ ನಾಲ್ಕು ಮಂದಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಆರು ಮಂದಿ ಪ್ರವಾಸಿಗಳ ತಂಡ ಬೇಕಲ ಕೋಟೆಗೆ ತೆರಳಿತ್ತು. ಅವರ ಪೈಕಿ ಒಬ್ಬರ ಹುಟ್ಟುಹಬ್ಬವಾಗಿತ್ತು. ಬೇಕಲ ಕೋಟೆ ವೀಕ್ಷಣೆಯ ನಂತರ ತಂಡವು ಹಿಂತಿರುಗುತ್ತಿದ್ದಾಗ, ಮೇಲ್ಪರಂಬ ಬಳಿ ಗ್ಯಾಂಗ್ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದೆ. ಆರು ಮಂದಿಯ ತಂಡದಲ್ಲಿ ಮೂವರು ಹುಡುಗರು ಮತ್ತು ಮೂವರು ಹುಡುಗಿಯರು ಇದ್ದರು. ಯುವಕ ಯುವತಿಯರ ತಂಡವು ಮೇಲ್ಪರಂಬದಲ್ಲಿ ಹೋಟೆಲ್‌ಗೆ ಊಟ ಮಾಡಲು ಹೋದಾಗ ನಾಲ್ವರ ತಂಡ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದೆ. ಆಮೇಲೆ ಹಲ್ಲೆ ನಡೆಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸ್ಥಳೀಯರು ಮಾಹಿತಿ ನೀಡಿದ ನಂತರ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಳಿಕ ಪೋಷಕರಿಗೆ ಕರೆ ಮಾಡಿ ಕಾರಿನಲ್ಲಿದ್ದ ಯುವತಿಯರನ್ನು ಕಳುಹಿಸಿಕೊಡಲಾಗಿದೆ. ಬಂಧಿತರ ಮೇಲೆ ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಬೇಕಲ ಕೋಟೆಯು ಕೇರಳದ ಕಾಸರಗೋಡು ಜಿಲ್ಲೆಯ ಸಮೀಪ ಇರುವ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಕರ್ನಾಟಕದ ಅನೇಕ ಪ್ರವಾಸಿಗರು ಈ ಐತಿಹಾಸಿಕ ಕೋಟೆಗೆ ಭೇಟಿ ನೀಡುತ್ತಾರೆ. ಈ ಕೋಟೆ ಸುಮಾರು 15ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎಂದು ಭಾವಿಸಲಾಗಿದೆ. ವೆಂಕಟಪ್ಪ ನಾಯಕ ಹಾಗೂ ಶಿವಪ್ಪ ನಾಯಕ ರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಕೋಟೆಯನ್ನು ನಂತರ ಟಿಪ್ಪು ಸುಲ್ತಾನ್ ವಶಪಡಿಸಿಕೊಂಡಿದ್ದ ಎನ್ನಲಾಗಿದೆ. ಟಿಪ್ಪು ಮರಣದ ನಂತರ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ಈ ಕೋಟೆಯನ್ನು ವಶಪಡಿಸಿಕೊಂಡಿತ್ತು. ಪ್ರಸ್ತುತ ಭಾರತೀಯ ಪುರಾತತ್ವ ಇಲಾಖೆಯ ಅಧೀನದಲ್ಲಿದೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ