ಬೆಂಗಳೂರು: ವಿಮಾನಗಳು ಸಾಮಾನ್ಯ ಪ್ರಯಾಣಿಕರನ್ನು ಬಿಟ್ಟು ಹೋದ ಉದಾಹರಣೆ ಸಾಕಷ್ಟಿವೆ. ಗಣ್ಯರಿಗೂ ಇಂತಹ ಅನುಭವ ಆಗಿರುತ್ತದೆ. ಆದರೆ ಅತಿ ಗಣ್ಯರನ್ನು ವಿಮಾನ ಬಿಟ್ಟು ಹೋಗುವುದು ಅಪರೂಪ. ವಿಮಾನ ತಪ್ಪಿಸಿಕೊಂಡು ಮತ್ತೊಂದು ವಿಮಾನ ಏರುವ ಸನ್ನಿವೇಶವನ್ನು ಎದುರಿಸಿದ್ದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್. ಇದರಿಂದ ಮುಜುಗರಕ್ಕೆ ಒಳಗಾದ ರಾಜ್ಯಪಾಲರು ಮತ್ತೊಂದು ವಿಮಾನದಲ್ಲಿ ಪ್ರಯಾಣ ಮುಂದುವರೆಸಿದ್ದಾರೆ. ಶಿಷ್ಟಾಚಾರ ಅಧಿಕಾರಿಗಳ ಗೊಂದಲದಿಂದಲೇ ಇದು ಆಗಿದ್ದು, ತನಿಖೆ ನಡೆಸುವುದಾಗಿ ವಿಮಾನ ಸಂಸ್ಥೆ ಹೇಳಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಹತ್ತಿಸಿಕೊಳ್ಳದೆ ಏರ್ ಏಷ್ಯಾ ವಿಮಾನ ಟರ್ಮಿನಲ್ -2ರಿಂದ ಹೈದರಾಬಾದ್‌ಗೆ ಹಾರಿರುವ ಅಪರೂಪದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ನಿಗಧಿತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರಾಜ್ಯಪಾಲರು ಹೈದರಾಬಾದ್ ಗೆ ತೆರಳಬೇಕಿತ್ತು. ವಿಮಾನದೊಳಗೆ ಪ್ರವೇಶಿಸಲು ರಾಜ್ಯಪಾಲರು ತುಂಬಾ ತಡವಾಗಿ ಆಗಮಿಸಿದ್ದರು. ಅವರನ್ನು ಹತ್ತಿಸಿಕೊಳ್ಳಲು ಏರ್ ಏಷ್ಯಾದ ಮೇಲಿನ ಹಂತದ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ರಾಜ್ಯಪಾಲರನ್ನು ಬಿಟ್ಟು ಹೋದ ವಿಮಾನ I 5972 ಎಂದು ತಿಳಿದು ಬಂದಿದ್ದು ಈ ವಿಮಾನ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 2 ಗಂಟೆ 5ನಿಮಿಷಕ್ಕೆ ತಲುಪಿದೆ. ನಂತರ 90 ನಿಮಿಷಗಳ ನಂತರ ಮತ್ತೊಂದು ವಿಮಾನದಲ್ಲಿ ರಾಜ್ಯಪಾಲರು ಹೈದರಾಬಾದ್‌ಗೆ ತೆರಳಿದ್ದಾರೆ. ಶಿಷ್ಟಾಚಾರದ ಪ್ರಕಾರ ವಿವಿಐಪಿ ಗಳೆಂದು ಗುರುತಿಸಲ್ಪಟ್ಟಿರುವ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ವಿಐಪಿ ವಿಶ್ರಾಂತ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಈ ಸ್ಥಳ ಸಾರ್ವಜನಿಕರ ಕಣ್ಣಿಗೆ ಬೀಳುವುದಿಲ್ಲ. ರಾಜ್ಯಪಾಲರ ವಿಷಯದಲ್ಲಿ ಶಿಷ್ಟಾಚಾರವನ್ನು ಪಾಲಿಸಲಾಗಿದೆ ಎಂದು ಒಂದು ಮೂಲ ಹೇಳುತ್ತದೆ. ಸಾಮಾನ್ಯವಾಗಿ ವಿಐಪಿ ವಿಶ್ರಾಂತ ಕೊಠಡಿಯಿಂದ ರಾಜ್ಯಪಾಲರನ್ನು ಕರೆದೊಯ್ಯುವ ವಾಹನ ಸಾಮಾನ್ಯ ಗೇಟ್ ಮೂಲಕ ಹೋಗುವ ಹಾಗಿಲ್ಲ. ಪ್ರತ್ಯೇಕ ವಿಐಪಿ ದ್ವಾರದಿಂದ ನಿರ್ಗಮಿಸಬೇಕು. ಏಕೆಂದರೆ ಸಾಮಾನ್ಯ ದ್ವಾರ ವಿಮಾನ ಹೊರಡುವ ಅರ್ಧ ಗಂಟೆ ಮುಂಚಿತವಾಗಿ ಮುಚ್ಚಲ್ಪಡುತ್ತದೆ. ಎಲ್ಲಾ ಪ್ರಯಾಣಿಕರು ವಿಮಾನ ಹತ್ತಿದ ನಂತರ ಕೊನೆಯವರಾಗಿ ರಾಜ್ಯಪಾಲರು ವಿಮಾನ ಹತ್ತುತ್ತಾರೆ. ಈ ಮಾಹಿತಿಯನ್ನು ರಾಜ್ಯಪಾರ ಶಿಷ್ಟಾಚಾರ ಸಿಬ್ಬಂದಿಗೆ ನೀಡಲಾಗಿತ್ತು. ವಿಮಾನ ನಿಲ್ದಾಣ ಪ್ರಾಧಿಕಾರದ ಮೂಲಗಳ ಪ್ರಕಾರ ರಾಜ್ಯಪಾಲರು ವಿಮಾನ ಬಳಿ ತೆರಳಿದಾಗ ವಿಮಾನದ ಬಾಗಿಲು ಮುಚ್ಚಿರಲಿಲ್ಲ. ಆದ್ದರಿಂದ ಪ್ರಯಾಣ ಮಾಡಲು ಅವರಿಗೆ ಅವಕಾಶ ನೀಡಬೇಕಿತ್ತು ಎಂದು ಹೇಳುತ್ತವೆ. ಮತ್ತೊಂದು ಮಾಹಿತಿಯ ಪ್ರಕಾರ ವಿಮಾನ ಹೊರಡುವುದಕ್ಕೂ ಮುನ್ನ ಪ್ರಯಾಣಿಕರ ಪಟ್ಟಿಗೆ ಸಹಿ ಹಾಕಿ ಅಂತಿಮ ಪಟ್ಟಿಯನ್ನು ಪೈಲಟ್ ಗಮನಕ್ಕೆ ತರಲಾಗುತ್ತದೆ. ನಂತರ ಆಗಮಿಸುವ ಯಾವುದೇ ಪ್ರಯಾಣಿಕರನ್ನು ವಿಮಾನ ಹತ್ತಿಸದೆ ಇರಲು ಪೈಲಟ್ ಗೆ ಅಧಿಕಾರ ಇದೆ ಎಂದೂ ಹೇಳಲಾಗುತ್ತದೆ. ಸಂಜೆಯವರೆಗೂ ಏರ್ ಏಷ್ಯಾ ವಿಮಾನ ಅಧಿಕರಿಗಳನ್ನು ರಾಜ್ಯಪಾಲರ ಶಿಷ್ಟಾಚಾರ ಸಿಬ್ಬಂದಿ ವಿಚಾರಣೆ ನಡೆಸಿದ್ದಾರೆ. ಒಂದು ವೇಳೆ ವಿಮಾನ ಕಂಪನಿಯಿಂದ ತಪ್ಪಾಗಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳೂ ಖಚಿತಪಡಿಸಿವೆ. ಈ ಸಂಬಂಧ ವಿಮಾನ ಪ್ರಾಧಿಕಾರ ಅಥವಾ ಏರ್ ಏಷ್ಯಾ ವಕ್ತಾರರು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಇದು ಅಪರೂಪದ ಘಟನೆಯಾದರೂ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಅನೇಕ ಗಣ್ಯರು ವಿವಿಧ ಕಾರಣಗಳಿಗಾಗಿ ವಿಮಾನ ಮಿಸ್ ಮಾಡಿಕೊಂಡಿರುವ ಪ್ರಕರಣಗಳು ಇವೆ. ಈ ಹಿಂದೆ ನಾಗರೀಕ ವಿಮಾನ ಸಚಿವ ಶಿವರಾಜ್ ಪಾಟೀಲ್ ಅವರನ್ನೇ ವಿಮಾನದೊಳಗೆ ಹತ್ತಿಸಿಕೊಂಡಿರಲಿಲ್ಲ. ಅವರು ಮತ್ತು ಮತ್ತೊಬ್ಬ ಸಚಿವ ರಾಜೇಶ್ ಪೈಲಟ್ ಅವರು ಎಕ್ಸ್ ರೇ ಯಂತ್ರದ ಮೂಲಕ ಆಗಮಿಸಿರಲಿಲ್ಲ ಎಂಬ ಕಾರಣಕ್ಕೆ ಅವರಿಗೆ ವಿಮಾನ ಪ್ರವೇಶವನ್ನು ಪೈಲಟ್ ನಿರಾಕರಿಸಿದ್ದರು. ನಂತರ ಅವರು ಎಕ್ಸ್ ರೇ ಯಂತ್ರದ ಮೂಲಕ ಆಗಮಿಸಿದಾಗ ಪ್ರಯಾಣ ಮುಂದುವರೆದಿತ್ತು.