ಬೆಂಗಳೂರು: ಈ ಬಾರಿ ಮುಂಗಾರು ಮಳೆ ಕೊರತೆಯಿಂದಾಗಿ ತರಕಾರಿಗಳು ಹಾಗೂ ಹಣ್ಣುಗಳ ಇಳುವರಿ ಕುಂಠಿತಗೊಂಡಿದೆ. ಟೊಮೆಟೊ ಕೆಜಿಗೆ 200 ಗಡಿ ದಾಟಿದ ಬೆನ್ನಲ್ಲೇ ಒಮ್ಮೆಲೆ ಕುಸಿತಗೊಂಡು ಇದೀಗ ಕೆಜಿಗೆ 40ರಿಂದ 50 ರೂಪಾಯಿ ಕಂಡಿದೆ. ಇದೀಗ ಏಲಕ್ಕಿ ಬಾಳೆ ಹಣ್ಣಿನ ಬೆಲೆ ಏರಿಕೆ ಸರದಿ. ಹೌದು, ಕೇಜಿಗೆ 60 ರಿಂದ 70 ರೂ. ಇದ್ದ ಏಲಕ್ಕಿ ಬಾಳೆಹಣ್ಣು ಒಮ್ಮೆಲೇ 100 ರೂ.ಗೆ ಮಾರಾಟವಾಗುತ್ತಿದೆ.
ರಾಜ್ಯದಲ್ಲಿ ಮಳೆಯ ಕೊರತೆ ಹಾಗೂ ಬಿಸಿಲ ತಾಪಮಾನದಿಂದಾಗಿ ಬಾಳೆಹಣ್ಣಿನ ಇಳುವರಿ ಕುಂಠಿತಗೊಂಡಿದೆ. ಮಾರುಕಟ್ಟೆಯಲ್ಲಿ ಬಾಳೆಹಣ್ಣಿಗೆ ಬೇಡಿಕೆ ಇದ್ದು, ಬಾಳೆಹಣ್ಣಿನ ಪೂರೈಕೆ ಕಡಿಮೆಯಾಗಿದೆ.
ರಾಜ್ಯದಲ್ಲಿ ಬಾಳೆಹಣ್ಣನ್ನು ಹೆಚ್ಚಾಗಿ ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಬೆಳೆಯುತ್ತಿದ್ದಾರೆ. ಬೆಂಗಳೂರು ನಗರಕ್ಕೆ ಈ ಜಿಲ್ಲೆಗಳೂ ಸೇರಿದಂತೆ ಹೆಚ್ಚಾಗಿ ತಮಿಳುನಾಡಿನಿಂದ ಬಾಳೆಹಣ್ಣು ಪೂರೈಕೆ ಯಾಗುತ್ತದೆ. ಆದರೆ ಕಳೆದ ಒಂದು ವಾರದಿಂದ ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಾಗುತ್ತಿದ್ದು ಪೂರೈಕೆ ಮಾತ್ರ ಕಡಿಮೆಯಾಗಿದೆ.
ಇನ್ನು ಮುಂದಿನ ವಾರ ವರಮಹಾಲಕ್ಷ್ಮಿ ಹಬ್ಬ ಇರುವುದರಿಂದ ಈಗಿನಿಂದಲೇ ಹಣ್ಣುಗಳ ಬೆಲೆ ಏರಿಕೆ ಕಂಡಿದೆ. ಪಚ್ಚ ಬಾಳೆಹಣ್ಣು ಹಾಗೂ ಏಲಕ್ಕಿ ಬಾಳೆಹಣ್ಣನ್ನು ಈ ಭಾಗದ ಜನ ಹೆಚ್ಚಾಗಿ ಉಪಯೋಗಿಸುತ್ತಾರೆ. ಹೀಗಾಗಿಯೇ ಏಲಕ್ಕಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.
ಹಾಪ್ ಕಾಮ್ಸ್ ಗಳಲ್ಲಿ ಏಲಕ್ಕಿ ಬಾಳೆಹಣ್ಣು ಕೆಜಿಗೆ 90 ರೂಪಾಯಿ ಹಾಗೂ ಪಚ್ಚ ಬಾಳೆಹಣ್ಣಿಗೆ ಕೆ.ಜಿಗೆ 38 ರೂಪಾಯಿ ಇದೆ. ಆದರೆ ಮಾರುಕಟ್ಟೆ ಹಾಗೂ ಸೂಪರ್ ಮಾರ್ಕೆಟ್ಗಳಲ್ಲಿ ಕೇಜಿಗೆ 100 ರಿಂದ 110 ರೂ. ತನಕ ಏಲಕ್ಕಿ ಬಾಳೆಹಣ್ಣನ್ನು ಮಾರಾಟ ಮಾಡಲಾಗುತ್ತಿದೆ.
ದಿನೇ ದಿನೇ ಏರಿಕೆ ಆಗುತ್ತಿರುವ ಬಾಳೆಹಣ್ಣಿನ ದರವು ಮುಂದಿನ ವಾರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಹಬ್ಬದ ಸಂದರ್ಭದಲ್ಲಿ ಹಣ್ಣಿನ ಬೆಲೆಗಳು ಕಡಿಮೆಯಾಗುವುದಿಲ್ಲ. ಬದಲಾಗಿ ದುಪ್ಪಟ್ಟಾಗುವ ಸಾಧ್ಯತೆಯೇ ಹೆಚ್ಚು ಎನ್ನುವುದು ವ್ಯಾಪಾರಸ್ಥರ ಅಭಿಪ್ರಾಯ. ಹಬ್ಬದ ಸಂದರ್ಭದಲ್ಲಿ ಹಣ್ಣು ಹೂವಿನ ಬೆಲೆ ಹೆಚ್ಚಳವಾಗುವುದು ಸಹಜ. ಆಗ ಬೇಡಿಕೆ ಇರುತ್ತದೆ ಎನ್ನುವ ಕಾರಣ ನೀಡಬಹುದು. ಇನ್ನೂ ಹಬ್ಬಗಳು ಶುರುವಾಗಿಲ್ಲ. ಇಳುವರಿ ಕಡಿಮೆ ಎನ್ನುವ ಕಾರಣ ನೀಡಿ ಬಾಳೆಹಬ್ಬ ಹಬ್ಬದ ಸಮಯಕ್ಕೆ ಕೆಜಿಗೆ 150ರೂ.ವರೆಗೂ ಏರಿಕೆಯಾಗಬಹುದು ಎನ್ನುವುದು ಬೆಂಗಳೂರಿನ ಗೃಹಿಣಿಯೊಬ್ಬರ ಆತಂಕದ ನುಡಿ.