ಮಂಗಳೂರು: ಯುವಕನೋರ್ವ ವೀಡಿಯೋ (Video) ಮಾಡಿ ತನ್ನ ಸಾವಿಗೆ ಯಾರೆಲ್ಲ ಕಾರಣ ಎಂದು ಹೇಳಿ ಆತ್ಮಹತ್ಯೆಗೆ ಯತ್ನಿಸಿದ (Suicide Attempt) ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನಲ್ಲಿ (Putturu) ನಡೆದಿದೆ.
ಪುತ್ತೂರಿನ ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಇದೀಗ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅದ್ರಾಮ ಎಂಬವರ ಮನೆಯಲ್ಲಿ ನಾಸಿರ್ ಕಾರು ಚಾಲಕನಾಗಿದ್ದು, ಇತ್ತೀಚೆಗೆ ಅದ್ರಾಮನ ಕುಟುಂಬದ ಹೆಣ್ಣಿನ ಜೊತೆ ಸಂಬಂಧ ಇದೆಯೆಂದು ಹೇಳಿ ಅದ್ರಾಮ ಹಾಗೂ ಆತನ ಕುಟುಂಬಸ್ಥರು ಹಲ್ಲೆ ನಡೆಸಿರೋದಾಗಿ ಆರೋಪಿಸಿದ್ದಾನೆ. ಅದ್ರಾಮ ಹಾಗೂ ಹೆಣ್ಣಿನ ಗಂಡ, ಮತ್ತೋರ್ವನ ಜೊತೆ ಕಾರಿನಲ್ಲಿರುವಾಗಲೇ ಅವರ ಎದುರೇ ಮೊಬೈಲ್ ವೀಡಿಯೋ ಮೂಲಕ ತನ್ನ ನೋವನ್ನು ಹೇಳಿಕೊಂಡಿದ್ದಾನೆ. ನನಗೆ ಯಾವುದೇ ಹೆಣ್ಣಿನ ಜೊತೆ ಸಂಬಂಧ ಇಲ್ಲ, ಆಕೆಯ ಗಂಡನೇ ಈ ಕಾರಿನಲ್ಲಿದ್ದಾನೆ ಎನ್ನುತ್ತಾ ಮೂವರನ್ನೂ ವೀಡಿಯೋದಲ್ಲಿ ತೋರಿಸಿ ಇವರೇ ನನ್ನ ಸಾವಿಗೆ ಕಾರಣ, ನಾನು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿ ವೀಡಿಯೋವನ್ನು ಕೊನೆಗೊಳಿಸಿದ್ದಾನೆ. ಬಳಿಕ ನಾಸಿರ್ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.