ಸುಳ್ಯ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್, ದ. ಕ. ಜಿಲ್ಲೆ-02, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ದ.ಕ ಜಿಲ್ಲೆ ಇದರ ವತಿಯಿಂದ ಗಾಂಧಿಸ್ಮೃತಿ ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆದ ಬೃಹತ್ ಜನಜಾಗೃತಿ ಸಮಾವೇಶ ನಡೆಯಿತು. ಈ ಸಂಧರ್ಭದಲ್ಲಿ ಮದ್ಯಮುಕ್ತ ಸಮಾಜಕ್ಕಾಗಿ ಎಂಟು ಠರಾವುಗಳನ್ನು ಮಂಡಿಸಲಾಯಿತು. ಮದ್ಯಪಾನದಿಂದ ಉಂಟಾಗುವ ಸಾಮಾಜಿಕ ಕಷ್ಟ, ನಷ್ಟಗಳು ಮತ್ತು ಸರಕಾರದ ಬೊಕ್ಕಸಕ್ಕೆ ಆಗುವ ನಷ್ಟದ ಕುರಿತಂತೆ ವೈಜ್ಞಾನಿಕ ಅಧ್ಯಯನ ಮಾಡಲು ಸಮಿತಿ ರಚಿಸಿ ವರದಿ ಹೊರತಂದು ರಾಜ್ಯದಲ್ಲಿ ಸಂಪೂರ್ಣ ಮದ್ಯಮಾರಾಟ ನಿಷೇಧ ಮಾಡಿ ಪಾನನಿಷೇಧವನ್ನು ಜಾರಿಗೊಳಿಸಬೇಕೆಂದು, ಜನಜಾಗೃತಿ ವೇದಿಕೆಯು ನಡೆಸುವ ಕಾರ್ಯ ಚಟುವಟಿಕೆಗಳಲ್ಲಿ ಸಂಪೂರ್ಣ ಸಹಕಾರ ನೀಡುವಂತೆ ಅಬಕಾರಿ ಇಲಾಖೆ, ಪೋಲಿಸ್ ಇಲಾಖೆಗೆ ಆದೇಶಿಸಬೇಕು. ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಮದ್ಯಪಾನ, ಮತ್ತಿತರ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವೇದಿಕೆಯು ವರ್ಷಂ ಪ್ರತಿ ಕಾರ್ಯಕ್ರಮ ರೂಪಿಸುತ್ತಿದೆ. ಈ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆಯ ಮೂಲಕವೇ ಆಯೋಜಿಸಲು ಆದೇಶಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿರುವ ಅಂಗಡಿ, ಹೋಟೇಲುಗಳಲ್ಲಿ ಅನಧಿಕೃತವಾಗಿ ಮದ್ಯಮಾರಾಟ ನಡೆಯುತ್ತಿದೆ. ಇದರ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೊಳಿಸಬೇಕು, ಶಿಬಿರಗಳಲ್ಲಿ ಪಾನಮುಕ್ತರಾದವರಿಗೆ ಸರಕಾರ ವಿಶೇಷ ಸೌಲಭ್ಯ ಅಥವಾ ಪ್ಯಾಕೇಜ್ ನೀಡುವ ಬಗ್ಗೆ ಚಿಂತಿಸಬೇಕು.

ಹಾಗೂ ಶಾಲಾ ಪಠ್ಯ ಪುಸ್ತಕಗಳಲ್ಲಿ ಮಾದಕ ವಸ್ತುಗಳ ಸೇವನೆಯ ವಿರುದ್ಧ ಜಾಗೃತಿ ಮೂಡಿಸುವ ಪಠ್ಯವನ್ನು ಅಳವಡಿಸಬೇಕು. ಸರಕಾರದ ವತಿಯಿಂದ ಯಾವುದೇ ಹೊಸ ಮದ್ಯದಂಗಡಿ, ಬಾರ್, ವೈನ್ ಶಾಪ್‌ಗಳಿಗೆ ಪರವಾನಿಗೆ ನೀಡಬಾರದು, ನಗರ ಪ್ರದೇಶದಲ್ಲಿರುವ ಬಾರ್, ವೈನ್ ಶಾಪ್ಗಳನ್ನು ಗ್ರಾಮಾಂತರ ಪ್ರದೇಶಕ್ಕೆ ಸ್ಥಳಾಂತರ ಮಾಡಬಾರದು ಈ ಮೂಲಕ ಪಾನಮುಕ್ತರಾಗಲು ಆಕರ್ಷಣೆ ನೀಡಬೇಕು. ಬಜೆಟ್‌ನಲ್ಲಿ ಈ ಉದ್ದೇಶಕ್ಕಾಗಿ ಹಣ ಮೀಸಲಿಡಬೇಕು, ರಾಜ್ಯಾದ್ಯಂತ ಪ್ರಸ್ತುತ ಹೊಸ ಮದ್ಯದಂಗಡಿಗಳ ತೆರವು ಪ್ರಸ್ತಾಪವನ್ನು ಸರಕಾರ ಕೈಬಿಡಬೇಕು ಇತ್ಯಾದಿ ಬೇಡಿಕೆಗಳ ನಿರ್ಣಯವನ್ನು ಮಂಡಿಸಿ ಸರಕಾರಕ್ಕೆ ಸಲ್ಲಿಸಲಾಯಿತು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಾಯಸ್ ಸಭೆಯಲ್ಲಿ ಠರಾವು ಮಂಡಿಸಿದರು. ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ಹಾಗೂ ತಾಲೂಕು ಅಧ್ಯಕ್ಷ ಲೋಕನಾಥ ಅಮೆಚೂರು ಅವರು ನಿರ್ಣಯವನ್ನು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಶಂಕರಪ್ಪ ಅವರ ಮೂಲಕ ಸರಕಾರಕ್ಕೆ ಸಲ್ಲಿಸಿದರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ