ಸುಳ್ಯ ನಗರ ಪಂಚಾಯತಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಹಾಗೂ ಸಿಬ್ಬಂದಿಗಳ ಕಾರ್ಯನಿರ್ವಹಣೆಯ ಕುರಿತು ಅಕ್ಟೋಬರ್ 7ರಂದು ಬೆಳಿಗ್ಗೆ 11 ಗಂಟೆಗೆ ನಗರ ಪಂಚಾಯತ್ ಸಭಾಂಗಣದಲ್ಲಿ ಸಭೆಯನ್ನು ಕರೆಯಲಾಗಿತ್ತು.
ಇಂದಿನ ಸಭೆಗೆ ಆಡಳಿತ ಸದಸ್ಯರು ಮತ್ತು ವಿಪಕ್ಷದ ಸದಸ್ಯರುಗಳು, ಸಿಬ್ಬಂದಿ ವರ್ಗದವರು ಸಮಯಕ್ಕೆ ಸರಿಯಾಗಿ ಬಂದು ಸಭಾಂಗಣದಲ್ಲಿ ಸೇರಿಕೊಂಡಿದ್ದರು.
ಅದೇ ಸಮಯಕ್ಕೆ ಸಭೆಗೆ ಬಂದ ನಗರ ಪಂಚಾಯತ್ ಮುಖ್ಯ ಅಧಿಕಾರಿ ಕೆಲವೇ ಕ್ಷಣಗಳು ಮಾತ್ರ ಅಲ್ಲಿ ನಿಂತು ಬಳಿಕ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಕಾನ್ಫರೆನ್ಸ್ ಸಭೆ ಇದೆ ಹತ್ತು ನಿಮಿಷದ ಬಳಿಕ ಬರುತ್ತೇನೆ ಎಂದು ಹೋದವರು ಮತ್ತೆ ಸಭೆಗೆ ಬಾರಲೇ ಇಲ್ಲ ಎಂದು ತಿಳಿದುಬಂದಿದೆ.
ಅವರು ತೆರಳಿದ ಸುಮಾರು ಒಂದು ಗಂಟೆಯ ಬಳಿಕ ನಗರ ಪಂಚಾಯತ್ ಆಡಳಿತ ಅಧಿಕಾರಿ ತಹಶೀಲ್ದಾರರು ಬಂದು ತಮ್ಮ ಆಸನವನ್ನು ಸ್ವೀಕರಿಸಿ ಅವರು ಕೂಡ ಕೇವಲ ಅರ್ಧ ಮುಕ್ಕಾಲು ಗಂಟೆ ಕುಳಿತು ಅವರು ಕೂಡ ಅಲ್ಲಿಂದ ತೆರಳಿದರು ಎನ್ನಲಾಗಿದೆ. ಆದರೆ ನಗರ ಪಂಚಾಯತ್ ಅಭಿವೃದ್ಧಿಯ ಕುರಿತು ಸಭೆ ನಡೆಸುವಾಗ ಅಲ್ಲಿ ಇರಬೇಕಾಗಿದ್ದ ಮುಖ್ಯ ಅಧಿಕಾರಿಗಳು, ಇಂಜಿನಿಯರ್, ಆರೋಗ್ಯ ನಿರೀಕ್ಷಕ, ಮುಂತಾದ ಮುಖ್ಯ ಅಧಿಕಾರಿಗಳೇ ಇಲ್ಲದೆ ಅಭಿವೃದ್ಧಿಯ ಬಗ್ಗೆ ಯಾರ ಬಳಿ ಚರ್ಚಿಸುವುದು ಎಂಬ ಮಾತುಗಳು ಸಭೆಯಲ್ಲಿ ಕುಳಿತ ಸದಸ್ಯರುಗಳು ಪರಸ್ಪರ ಮಾತಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಆದರೆ ತಹಶೀಲ್ದಾರ್ ಬಂದ ಬಳಿಕ ಕೇವಲ ಒಂದು ಎರಡು ವಿಷಯಗಳ ಬಗ್ಗೆ ಚರ್ಚೆ ನಡೆದು ಅವರು ಕೂಡ ಸಭೆಯಿಂದ ತೆರಳಿದಾಗ ಕೋಪಗೊಂಡ ವಿಪಕ್ಷ ಸದಸ್ಯ ಕೆ ಎಸ್ ಉಮ್ಮರ್ ರವರು ಈ ರೀತಿ ಮಾಡುವುದಾದರೆ ಈ ಸಭೆಯನ್ನು ಕರೆದದ್ದು ಏಕೆ ಎಂದು ಪ್ರಶ್ನಿಸಿ ಸಭಾ ತ್ಯಾಗ ಮಾಡಿ ಈ ಸಭೆಯನ್ನು ಮುಂದೆ ಒಂದು ದಿನ ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳು ಇರುವ ದಿವಸ ಮಾಡುವ ಮತ್ತು ಅಧಿಕಾರಿಗಳು ಇಲ್ಲದೇ ಈ ಸಭೆಯನ್ನು ಮುಂದುವರಿಸಿದಲ್ಲಿ ಕಾನೂನು ಪ್ರಕಾರ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿ ಸಭೆಯಿಂದ ಹೊರಡಲು ಮುಂದಾದಾಗ ವಿಪಕ್ಷ ಸದಸ್ಯರುಗಳಾದ ಡೇವಿಡ್ ಧೀರಾ ಕ್ರಾಸ್ತ ಮತ್ತು ಬಾಲಕೃಷ್ಣ ಭಟ್ ಕೊಡಕೇರಿಯವರು ಕೂಡ ಅಲ್ಲಿಂದ ತೆರಳಿದರು.
ಈ ಸಭೆಯಲ್ಲಿ ಆಡಳಿತ ಪಕ್ಷದ ಇಬ್ಬರು ಸದಸ್ಯರನ್ನು ಹೊರತುಪಡಿಸಿ ಉಳಿದ 12 ಸದಸ್ಯರುಗಳು ಭಾಗವಹಿಸಿದ್ದರು ಎನ್ನಲಾಗಿದೆ.
ಆದ್ದರಿಂದ ಅಧಿಕಾರಿಗಳ ನಿರ್ಲಕ್ಷತನದಿಂದ ಇಂದಿನ ಸಭೆ ಸಂಬಂಧ ಪಟ್ಟ ಚರ್ಚೆಗಳು ನಡೆಯದೆ ಹೋಗಿದೆ ಎಂದು ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.