ಇಂದು ಗಂಡ-ಹೆಂಡತಿ ನಡುವಿನ ಸಂಬಂಧಕ್ಕೆ ಅರ್ಥವೇ ಇಲ್ಲದಂತಾಗಿದೆ. ಪತಿ-ಪತ್ನಿಯ ಸಂಬಂಧಗಳು ದಿನೇ ದಿನೇ ಹದಗೆಡುತ್ತಿವೆ. ಸಣ್ಣಪುಟ್ಟ ಕಾರಣಗಳಿಗೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಕೊಲೆ ಮಾಡುವ ಹಂತಕ್ಕೂ ಹೋಗಿದ್ದಾರೆ. ಇದೀಗ ಉತ್ತರ ಪ್ರದೇಶದ ಝಾನ್ಸಿಯಲ್ಲಿ ವಿವಾಹಿತ ಮಹಿಳೆಯ ಸಾವು ಪೊಲೀಸರಲ್ಲಿ ಅನುಮಾನ ಮೂಡಿಸಿದೆ.

ಅಲ್ಲದೆ, ನಾಲ್ಕು ವರ್ಷದ ಮಗು ಬಿಡಿಸಿದ ಚಿತ್ರವೊಂದು ಪೊಲೀಸರಿಗೆ ಅಸ್ತ್ರವಾಗಿದ್ದು, ಅವರ ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ.

ಸೋನಾಲಿ ಬುಧೋಲಿಯಾ (27) ಮತ್ತು ಸಂದೀಪ್ ಬುಧೋಲಿಯಾ ಗಂಡ ಹೆಂಡತಿ. ದಂಪತಿಗೆ ದರ್ಶಿತಾ ಎಂಬ ನಾಲ್ಕು ವರ್ಷದ ಮಗಳಿದ್ದಾಳೆ. ಝಾನ್ಸಿಯ ಕೊಟ್ವಾಲಿ ಪ್ರದೇಶದ ಪಂಚವಟಿ ಶಿವ ಪರಿವಾರ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಆದರೆ, ಸೋಮವಾರ (ಫೆ.17) ಸೋನಾಲಿ ಬುಧೋಲಿಯಾ ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ.

ಸೋನಾಲಿಯ ಪತಿ ಮತ್ತು ಅತ್ತೆ-ಮಾವ, ಪೊಲೀಸರಿಗೆ ಕರೆ ಮಾಡಿ ಸೋನಾಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಾಹಿತಿ ನೀಡಿದರು. ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿ ಶವವನ್ನು ಪರಿಶೀಲಿಸಿದರು. ಈ ವೇಳೆ ಪೊಲೀಸರು ಅಲ್ಲೇ ಇದ್ದ ನಾಲ್ಕು ವರ್ಷದ ಮಗು ದರ್ಶಿತಾಳನ್ನು ಪ್ರಶ್ನಿಸಿದರು. ಆಕೆಯ ಪಾಲಕರು ಯಾವಾಗಲೂ ಜಗಳವಾಡುತ್ತಿದ್ದರು ಮತ್ತು ನನ್ನ ತಂದೆ, ಅಮ್ಮನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಹೇಳಿದ್ದಾಳೆ. ಅಲ್ಲದೆ, ಕಾಗದದ ಮೇಲೆ ರೇಖಾಚಿತ್ರವನ್ನೂ ಬಿಡಿಸಿದ್ದಾಳೆ. ರೇಖಾಚಿತ್ರದಲ್ಲಿ, ನೇಣು ಹಾಕಿಕೊಳ್ಳುತ್ತಿರುವ ಚಿತ್ರವನ್ನು ಬಿಡಿಸಿದ್ದಾಳೆ. ಸೋನಾಲಿಯನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಿಂಬಿಸಲು ಪ್ರಯತ್ನಿಸುತ್ತಿರುವುದಾಗಿ ಪೊಲೀಸರಿಗೆ ಅನುಮಾನ ಮೂಡಿದೆ.

ನನ್ನ ತಂದೆ ಬಹಳ ದಿನಗಳಿಂದ ತನ್ನ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಮಗು ಹೇಳಿರುವ ಮಾತುಗಳನ್ನು ಪೊಲೀಸರು ಹೇಳಿಕೆಯಾಗಿ ಪರಿಗಣಿಸಿದ್ದಾರೆ. ಅಲ್ಲದೆ, ಸೋನಾಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ಕರೆ ಮಾಡಿದಾಗ, ಪೊಲೀಸರು ಸ್ಥಳಕ್ಕೆ ಬಂದಾಗ ಪರಿಸ್ಥಿತಿ ಆ ರೀತಿ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇತ್ತ ಮಗಳ ಸಾವಿನ ಸುದ್ದಿ ತಿಳಿದ ಸೋನಾಲಿ ತಂದೆ ಸಂಜೀವ್ ತ್ರಿಪಾಠಿ ಕಣ್ಣೀರು ಹಾಕಿದ್ದಾರೆ. ಸಂಜೀವ್ ತ್ರಿಪಾಠಿ ಮಧ್ಯಪ್ರದೇಶದ ಟಿಕಮ್‌ಗಢ ಜಿಲ್ಲೆಯವರು. ಸೋನಾಲಿ 2019ರಲ್ಲಿ ಸಂದೀಪ್ ಅವರನ್ನು ವಿವಾಹವಾದರು. ಮದುವೆಯಾದಾಗಿನಿಂದ ಇಬ್ಬರ ನಡುವಿನ ಸಂಬಂಧ ಚೆನ್ನಾಗಿರಲಿಲ್ಲ. ಮದುವೆಗೆ ವರದಕ್ಷಿಣೆಯಾಗಿ 20 ಲಕ್ಷ ರೂ. ನೀಡಿದ್ದೆವು. ಆದರೂ , ಹಣಕ್ಕೆ ಬೇಡಿಕೆ ಇಡುತ್ತಲೇ ಇದ್ದರು. ಕಾರು ಖರೀದಿಸಲು ಹಣ ಕೇಳಿದಾಗ, ನಾನು ಇಲ್ಲ ಎಂದು ಹೇಳಿದ್ದೆ. ಅಂದಿನಿಂದ ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಈ ವಿಚಾರವಾಗಿ ನಾನು ಪೊಲೀಸರನ್ನು ಸಹ ಸಂಪರ್ಕಿಸಿದೆ. ಬಳಿಕ ಎರಡೂ ಕುಟುಂಬಗಳು ರಾಜಿ ಮಾಡಿಕೊಂಡೆವು ಎಂದು ಸೋನಾಲಿ ತಂದೆ ಹೇಳಿದ್ದಾರೆ.

ಸೋನಾಲಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಆದರೆ, ಆಕೆಯ ಪತಿ ಮತ್ತು ಅತ್ತೆ ಮಾವ, ಗಂಡು ಮಗುವಿಗೆ ಜನ್ಮ ನೀಡಬೇಕೆಂದು ಕಿರುಕುಳ ನೀಡುತ್ತಿದ್ದರು. ಸೋನಾಲಿಯನ್ನು ಆಸ್ಪತ್ರೆಯಲ್ಲಿ ಒಂಟಿಯಾಗಿ ಬಿಟ್ಟರು. ನಾನೇ ಹಣ ಪಾವತಿಸಿ ಮಗಳನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಬಂದೆ. ಸೋನಾಲಿ ಮನೆಗೆ ಬಂದಾಗ ಆಕೆಯನ್ನಾಗಲಿ ಅಥವಾ ದರ್ಶಿತಾಳನ್ನಾಗಲಿ ನೋಡಲು ಸಂದೀಪ್ ಬರಲಿಲ್ಲ. ಒಂದು ತಿಂಗಳ ನಂತರ ಸ್ವಲ್ಪ ಸಮಯ ಬಂದಿದ್ದರು ಎಂದು ಸಂಜೀವ್ ಹೇಳಿದರು. ಇತ್ತೀಚೆಗೆ, ಸೋನಾಲಿ, ಝಾನ್ಸಿಯ ಸಮತಾರ್‌ನಲ್ಲಿ ಸಂಬಂಧಿಕರೊಬ್ಬರ ಮದುವೆಗೆ ಹೋದಾಗ, ಸಂದೀಪ್ ಕರೆ ಮಾಡಿ ತಕ್ಷಣ ಮನೆಗೆ ಬರಲು ಆಕೆಯನ್ನು ಕೇಳಿಕೊಂಡನು. ಬಳಿಕ ಸೋಮವಾರ, ಕರೆ ಮಾಡಿ ಸೋನಾಲಿಯ ಆರೋಗ್ಯ ಸರಿಯಿಲ್ಲ ಎಂದನು. ಮತ್ತೊಮ್ಮೆ ಕರೆ ಮಾಡಿ ವಿಚಾರಿಸಿದಾಗ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದರು. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಸಂಜೀವ್​ ಹೇಳಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *