Advertisement

ಮೈಸೂರು: ಮೈನವಿರೇಳಿಸುವ ಬೈಕ್ ಸಾಹಸ, ನಿಬ್ಬೆರಗಾಗಿಸುವ ಅಶ್ವರೋಹಿ ದಳದ ಪಥಸಂಚಲನ, ನೂರಾರು ಕಲಾವಿದರ ಚಿತ್ತಾಕರ್ಷಕ ನೃತ್ಯ ವೈಭವದ ಸಂಗಮ ಮೈಸೂರು ದಸರಾಗೆ ವರ್ಣರಂಜಿತ ತೆರೆ ಎಳೆಯಿತು. ಆಕಾಶದಲ್ಲಿ ಮೂಡಿದ ‘ಹ್ಯಾಪಿ ದಸರಾ’ ಸಾಲು, ಕರ್ನಾಟಕ ಮ್ಯಾಪ್, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಕೃತಿ, ಗಂಡುಬೇರುಂಡ ಚಿತ್ರ, ಮೈಸೂರು ಅರಮನೆ, ಚಾಮುಂಡಿಬೆಟ್ಟದ ನಂದಿ, ದಸರಾ ಅಂಬಾರಿ.. ಚುಕ್ಕಿ ಬೆಳಕಿನ ಚಿತ್ರಗಳು ನೋಡುಗರಿಗೆ ಮನಸ್ಸಿಗೆ ಮುದ ನೀಡಿದವು. ಕೊನೆಯಲ್ಲಿ ‘ಸಿ ಯು ಇನ್ 2024’ (2024 ಕ್ಕೆ ಮತ್ತೆ ಭೇಟಿಯಾಗೋಣ) ಸಾಲು, ಅಯ್ಯೋ.. ಇಷ್ಟು ಬೇಗ ದಸರಾ ಮುಗಿಯಿತೇ!? ಮತ್ತೆ ಬೇಗ ದಸರಾ ಬರಲಿ ಎಂಬ ಭಾವನೆ ಜನರಲ್ಲಿ ಮೂಡುವಂತೆ ಮಾಡಿತು. ಜಂಬೂಸವಾರಿ ಬಳಿಕ ಮೈಸೂರಿನ ಬನ್ನಿಮಂಟಪದಲ್ಲಿ ಕಂಡುಬಂದ ದೃಶ್ಯಗಳಿವು. ಬನ್ನಿಮಂಟಪದಲ್ಲಿ ನಡೆದ ಪಂಚಿನ ಕವಾಯತು ಮೂಲಕ ಈ ಬಾರಿ ದಸರಾಗೆ ತೆರೆ ಎಳೆಯಲಾಯಿತು. ಜಂಬೂಸವಾರಿಗೆ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿದ್ದ ಸಿಎಂ, ರಾತ್ರಿ ನಡೆದ ಪಂಜಿನ ಕವಾಯತಿನಲ್ಲೂ ಭಾಗಿಯಾಗಿದ್ದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೊಟ್ ಅವರಿಗೆ ಪೊಲೀಸ್ ಇಲಾಖೆ ಗೌರವ ವಂದನೆ ಸಲ್ಲಿಸಿತು. ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಟೆಂಟ್ ಪೆಗ್ಗಿಂಗ್, ಶ್ವೇತಾಶ್ವ ಪಡೆಯ ಬೈಕ್ ಸ್ಟಂಟ್‌ಗೆ ಮೈಸೂರಿಗರು ಮನಸೋತರು. ಸಿಎಆರ್, ಡಿಎಆರ್, ಕಮಾಂಡೋ ಪೊಲೀಸ್, ಪೊಲೀಸ್ ಬ್ಯಾಂಡ್, ಅಶ್ವಾರೋಹಿ ದಳ ಸೇರಿದಂತೆ ಪೊಲೀಸ್ ಪಡೆಗಳಿಂದ ಆಕರ್ಷಕ ಪಥಸಂಚಲನದ ಜೊತೆಗೆ ಕಲಾತಂಡಗಳಿಂದ ನಾಡಿನ ಹಿರಿಮೆ ಗರಿಮೆ ನೃತ್ಯರೂಪಕ ಪ್ರದರ್ಶನ ಮಾಡಲಾಯಿತು. 300 ಜನ ಕಲಾವಿದರು ನೃತ್ಯ ಪ್ರದರ್ಶನ ಮಾಡಿದರು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನಿಂದ ಅಮೋಘ ನೃತ್ಯ ಪ್ರದರ್ಶನ ಕೂಡ ನಡೆಯಿತು. ಅಂತಿಮವಾಗಿ ಪಂಜು ಹಿಡಿದು ಚಿತ್ತಾಕರ್ಷಕ ಆಕೃತಿಗಳನ್ನ ಮೂಡಿಸುವ ಮೂಲಕ ಪೊಲೀಸರ ತಂಡ ಪಂಜಿನ ಕವಾಯತು ತಾಲೀಮು ಮುಗಿಸಿದರು. ಇನ್ನೂ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಸಚಿವ ಕೆ. ವೆಂಕಟೇಶ್ ಸೇರಿದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ