ಕೇರಳ: ತಮಿಳುನಾಡಿನಲ್ಲಿ ಚಿಕ್ಕನ್ ಶವರ್ಮ ತಿಂದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಮಾಸುವ ಮೊದಲೇ ಈಗ ಕೇರಳದಲ್ಲಿ ಚಿಕನ್‌ ಶವರ್ಮ ತಿಂದ ಬಳಿಕ ಅಸ್ವಸ್ಥನಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈತ ಕಕ್ಕನಾಡ್‌ನ ಮೆವೆಲಿಪುರಂ ಎಂಬಲ್ಲಿರುವ ರೆಸ್ಟೋರೆಂಟ್‌ವೊಂದರಲ್ಲಿ ಚಿಕನ್ ಶವರ್ಮ ತಿಂದಿದ್ದ, ಆದರೆ ನಂತರ ಆತನ ಆರೋಗ್ಯ ಹದಗೆಟ್ಟಿದ್ದು, ನಿನ್ನೆ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು 22 ವರ್ಷದ ರಾಹುಲ್ ಡಿ. ನಾಯರ್ ಎಂದು ಗುರುತಿಸಲಾಗಿದೆ. ಈತ ಕೊಚ್ಚಿನ್‌ನ ವಿಶೇಷ ಆರ್ಥಿಕ ವಲಯಕ್ಕೆ ಸಂಬಂಧಿಸಿದ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ. ಪಾಲದ ನಿವಾಸಿಯಾದ ಈತ ತನ್ನ ಸ್ನೇಹಿತರ ಜೊತೆ ಚಿಟ್ಟೆತುಕರಾದಲ್ಲಿ ನೆಲೆಸಿದ್ದ, ಪ್ರಾಥಮಿಕ ವರದಿಯ ಪ್ರಕಾರ ದೇಹದೊಳಗೆ ಆಗಿರುವ ಸೆಪ್ಟಿಕ್ ಅವರ ಸಾವಿಗೆ ಕಾರಣವಾಗಿದೆ. ಇದು ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರುವ ಗಂಭೀರ ಸೋಂಕು ಆಗಿದೆ  ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ. ಅವರನ್ನು ಅಕ್ಟೋಬರ್ 22 ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಯಿತು ಮತ್ತು ತಕ್ಷಣವೇ ವೆಂಟಿಲೇಟರ್  ಹಾಕಲಾಯಿತು. ಆದರೆ ಯಾವುದೇ ಚೇತರಿಕೆ ಕಂಡುಬರಲಿಲ್ಲ, ರಕ್ತ ಪರೀಕ್ಷೆಯಲ್ಲಿ ಆಹಾರ ವಿಷವಾಗಿರುವುದು ಧೃಡಪಟ್ಟಿದೆ. ಆಸ್ಪತ್ರೆಯು ಹೆಚ್ಚಿನ ದೃಢೀಕರಣಕ್ಕಾಗಿ ಅಮೃತಾ ಆಸ್ಪತ್ರೆಯ (ಕೊಚ್ಚಿಯಲ್ಲಿರುವ) ಲ್ಯಾಬ್‌ಗೆ ಮಾದರಿಗಳನ್ನು ಕಳುಹಿಸಿದೆ. ಫಲಿತಾಂಶ ಇನ್ನೂ ಲಭ್ಯವಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರೆಸ್ಟೋರೆಂಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸೆಕ್ಷನ್‌ 284ರ ಅಡಿ ದೂರು ದಾಖಲಾಗಿದೆ. ಶವರ್ಮಾ ಸೇವಿಸಿ ಜನರ ಆರೋಗ್ಯ ಹದಗೆಟ್ಟ ಹಿನ್ನೆಲೆ ದೂರು ಬಂದಿದ್ದು, ಹೀಗಾಗಿ ಹೊಟೇಲ್‌ನ್ನು ನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಬಂದ್ ಮಾಡಿಸಿದ್ದಾರೆ. ಇದೇ ರೆಸ್ಟೋರೆಂಟ್‌ನಲ್ಲಿ ಆಹಾರ ಸೇವಿಸಿದ್ದ ಇನ್ನೂ ಮೂವರು ಗ್ರಾಹಕರು ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದ್ದು, ಆಹಾರ ಹಾಗೂ ಸುರಕ್ಷತಾ ವಿಭಾಗ  ಈ ಬಗ್ಗೆ ವಿಸ್ತಾರವಾದ ತನಿಖೆ ನಡೆಸುತ್ತಿದೆ. 

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ