ಹೊಸದಿಲ್ಲಿ: ಪೆಗಾಸಸ್ ಸ್ಪೈವೇರ್ ಸುದ್ದಿ ತಣ್ಣಗಾಗುತ್ತಿರುವ ನಡುವೆಯೇ, ತಮ್ಮ ಫೋನ್‌ಗಳ ಮೇಲೆ ‘ಸರ್ಕಾರಿ ಪ್ರಾಯೋಜಕತ್ವದ ದಾಳಿ’ ನಡೆಯುತ್ತಿದೆ ಎಂದು ವಿರೋಧ ಪಕ್ಷಗಳ ವಿವಿಧ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್ ನಾಯಕ ಶಶಿ ತರೂರ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಶಿವಸೇನಾದ (ಉದ್ಧವ್ ಬಣ) ಪ್ರಿಯಾಂಕಾ ಚತುರ್ವೇದಿ ಅವರು ತಮ್ಮ ಐ ಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಕೋರರು ಟಾರ್ಗೆಟ್ ಮಾಡುತ್ತಿರಬಹುದು ಎಂದು ಆಪಲ್ ಕಂಪೆನಿಯಿಂದ ಫೋನ್ ಹಾಗೂ ಇ-ಮೇಲ್‌ಗಳಿಗೆ ಎಚ್ಚರಿಕೆ ಸಂದೇಶ ಬಂದಿರುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿಯಲ್ಲಿನ ಕೆಲವರಿಗೂ ಈ ಸಂದೇಶ ಬಂದಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸರ್ಕಾರ, ಈ ಸಂದೇಶಗಳ ಬಗ್ಗೆ ಅರಿವಿದೆ. ಐಫೋನ್‌ಗಳಲ್ಲಿ ಬೆದರಿಕೆ ಪತ್ತೆ ಮಾಡುವ ತಂತ್ರಜ್ಞಾನವು ಕೆಲವೊಮ್ಮೆ ಅಸಮಗ್ರ ಹಾಗೂ ಅಪೂರ್ಣವಾಗಿರುತ್ತದೆ ಎಂದಿದೆ.

ಸರ್ಕಾರಿ ಪ್ರಾಯೋಜಿತ ದಾಳಿಯ ನಿರಂತರ ಪ್ರಯತ್ನ’ವನ್ನು ತಮ್ಮ ವ್ಯವಸ್ಥೆಗಳು ಪತ್ತೆ ಮಾಡಿದರೆ ಈ ನೋಟಿಫಿಕೇಷನ್‌ಗಳು ರವಾನೆಯಾಗುತ್ತವೆ ಎಂದು ಆಪಲ್ ಹೇಳಿದೆ.

ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಎಎಪಿಯ ರಾಘವ್ ಛಡ್ಡಾ ಹಾಗೂ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಕಾಂಗ್ರೆಸ್‌ನ ಪವನ್ ಖೇರಾ ಅವರಿಗೂ ಇದೇ ರೀತಿ ಸಂದೇಶಗಳು ಬಂದಿವೆ ಎಂದು ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ. ಸಂಸದರು ತಮಗೆ ಬಂದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.

ಸಂದೇಶದಲ್ಲಿ ಏನಿದೆ?

ನೀವು ಸರ್ಕಾರಿ ಪ್ರಾಯೋಜಿತ ದಾಳಿಕೋರರಿಂದ ಗುರಿಯಾಗುತ್ತಿದ್ದೀರಿ ಎಂದು ಆಪಲ್‌ಗೆ ಭಾಸವಾಗಿದೆ. ಅವರು ನಿಮ್ಮ ಆಪಲ್ ಐಡಿಗೆ ಸಂಬಂಧಿಸಿದ ಐಫೋನ್‌ಗೆ ದೂರದಿಂದ ಕನ್ನ ಹಾಕಲು ಪ್ರಯತ್ನಿಸುತ್ತಿದ್ದಾರೆ” ಎಂದು ಆಪಲ್‌ನ ಸಂದೇಶ ಹೇಳಿದೆ. “ಈ ದಾಳಿಕೋರರು ನೀವು ಯಾರು ಅಥವಾ ನೀವು ಏನು ಮಾಡುತ್ತೀರಿ ಎಂಬ ಆಧಾರದಲ್ಲಿ ನಿಮ್ಮನ್ನು ವ್ಯಕ್ತಿಗತವಾಗಿ ಟಾರ್ಗೆಟ್ ಮಾಡುತ್ತಿರುವ ಸಾಧ್ಯತೆ ಇದೆ. ನಿಮ್ಮ ಸಾಧನವು ಸರ್ಕಾರಿ ಪ್ರಾಯೋಜಿತ ದಾಳಿಕೋರನಿಂದ ಹೊಂದಾಣಿಕೆಗೆ ಒಳಪಟ್ಟಿದ್ದರೆ, ನಿಮ್ಮ ಸೂಕ್ಷ್ಮ ಡೇಟಾ, ಸಂಹವನಗಳು ಅಥವಾ ಕ್ಯಾಮೆರಾ ಮತ್ತು ಮೈಕ್ರೋಫೋನ್‌ಗಳನ್ನು ಕದಿಯಲು ಅವರಿಗೆ ಸಾಧ್ಯವಾಗಲಿದೆ. ಇದು ಸುಳ್ಳು ಎಚ್ಚರಿಕೆಯಾಗುವ ಸಾಧ್ಯತೆ ಇದ್ದರೂ, ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ” ಎಂದು ತಿಳಿಸಿದೆ.

ಬಿಜೆಪಿ ಪ್ರತಿಕ್ರಿಯೆ ಏನು?

ತಮ್ಮ ಫೋನ್‌ಗಳನ್ನು ಹ್ಯಾಕ್ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕರ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ, ಆಪಲ್‌ನ ಸ್ಪಷ್ಟೀಕರಣ ಬರುವವರೆಗೂ ಕಾಯುವಂತೆ ಮನವಿ ಮಾಡಿದ್ದಾರೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ