ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ವಿರುದ್ಧ ಆರ್‌ಆರ್ ನಗರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ದರ್ಶನ್ ಮನೆಯ ನಾಯಿಗಳು ಮಹಿಳೆಯೊಬ್ಬರ ಮೇಲೆ ಎರಗಿ ಕಚ್ಚಿದ ಸಂಬಂಧ ಐಪಿಸಿ 289ರ ಅಡಿ ನಾಯಿ (Dog) ನೋಡಿಕೊಳ್ಳುತ್ತಿದ್ದವನ ಮೇಲೆ ಮತ್ತು ನಟ ದರ್ಶನ್ ವಿರುದ್ಧ ಕೇಸ್ ದಾಖಲಾಗಿದೆ. ಈ ಬಗ್ಗೆ ಸ್ವತಃ ದೂರುದಾರರಾದ ಅಮಿತಾ ಜಿಂದಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಆರ್‌ಆರ್ ನಗರದಲ್ಲಿ ಆಸ್ಪತ್ರೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದೆ. ದರ್ಶನ್ ಮನೆಯ ಬಳಿ ಖಾಲಿ ಜಾಗದಲ್ಲಿ ಕಾರನ್ನು ಪಾರ್ಕ್ ಮಾಡಿದ್ದು, ಕಾರ್ಯಕ್ರಮ ಮುಗಿಸಿ ಮರಳಿ ಬಂದಾಗ ಕಾರು ನಿಲ್ಲಿಸಿದ್ದ ಜಾಗದಲ್ಲಿ ಮೂರು ನಾಯಿಗಳು ಇದ್ದವು. ದರ್ಶನ್‌ರ ಮನೆ ಸಿಬ್ಬಂದಿಗೆ ನಾಯಿಗಳನ್ನು ಪಕ್ಕಕ್ಕೆ ಕರೆದುಕೊಳ್ಳುವಂತೆ ಕೇಳಿದೆ, ಆಗ ಈ ಜಾಗದಲ್ಲಿ ನೀವು ಕಾರು ಪಾರ್ಕ್ ಮಾಡುವಂತಿಲ್ಲ ಎಂದು ಸಿಬ್ಬಂದಿ ಹೇಳಿದ್ದರು ಎಂದು ಅಮಿತಾ ಮಾತನಾಡಿದ್ದಾರೆ. ಮಾತಿನ ಚಕಮಕಿಯ ಬಳಿಕ ನಾಯಿಗಳು ತನ್ನ ಮೇಲೆ ದಾಳಿ ನಡೆಸಿ ಹೊಟ್ಟೆ ಹಾಗೂ ಕೈಗೆ ಕಡಿದು ಗಾಯಗೊಳಿಸಿವೆ. ಅವರ ಸಿಬ್ಬಂದಿ ನಾಯಿಗೆ ಇಂಜೆಕ್ಷನ್ ಆಗಿದೆ ಹೋಗಿ ಎಂದು ಕಳುಹಿಸಿಬಿಟ್ರು. ಸ್ನೇಹಿತರ ಮಗನ ಸಹಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಆರ್‌ಆರ್ ನಗರ ಪೊಲೀಸ್ ಠಾಣೆಗೆ ಹೋಗಿ ಘಟನೆ ಸಂಬಂಧ ದೂರು ನೀಡಿದ್ದೇನೆ ಎಂದು ವಿವರಿಸಿದ್ದಾರೆ. ಸಿಬ್ಬಂದಿಯನ್ನ ಮೊದಲ ಆರೋಪಿ, ದರ್ಶನ್‌ರನ್ನು ಎರಡನೇ ಆರೋಪಿಯನ್ನಾಗಿಸಿ ಪ್ರಕರಣ ದಾಖಲಾಗಿದೆ. ದರ್ಶನ್ ಅವರು ಯಾವುದೇ ಕರೆ ಮಾಡಿಲ್ಲ ಮತ್ತು ಭೇಟಿ ಮಾಡಲಿಲ್ಲ. ಯಾರೋ ವ್ಯಕ್ತಿಯೊಬ್ಬರು ಆಸ್ಪತ್ರೆಯ ಖರ್ಚು ಭರಿಸೋದಾಗಿ ತಿಳಿಸಿದ್ದರು. ಅವರು ಯಾರು ಎಂದು ತಿಳಿದು ಬಂದಿಲ್ಲ. ಪೊಲೀಸರು ನಮಗೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೇಸ್ ದಾಖಲಾಗಿದೆ, ತನಿಖೆ ನಡೆಯಲಿ ಎಂದು ಗಾಯಗೊಂಡ ಮಹಿಳೆ ಅಮಿತಾ ತಿಳಿಸಿದರು.
Advertisement
Advertisement