ಇಸ್ಲಾಮಾಬಾದ್‌: ವಿಶ್ವಕಪ್‌ ಟೂರ್ನಿಯಲ್ಲಿ +2.102 ರನ್‌ರೇಟ್‌ನೊಂದಿಗೆ ಅಗ್ರಸ್ಥಾನಲ್ಲಿರುವ ಟೀಂ ಇಂಡಿಯಾ ಗೆಲುವಿನ ಕುರಿತು ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಹಸನ್‌ ರಾಝಾ (Hasan Raza) ಟೀಕಿಸಿದ್ದಾರೆ. ಐಸಿಸಿ ಮತ್ತು ಬಿಸಿಸಿಐ (ICC, BCCI), ಟೀಂ ಇಂಡಿಯಾ ಬೌಲರ್ಸ್‌ಗೆ (Indian Bowlers) ವಿಶೇಷ ಚೆಂಡುಗಳನ್ನ ಕೊಡುತ್ತಿದೆ. ಆದ್ದರಿಂದ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಆರೋಪಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾಕ್‌ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯ ಕುರಿತು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ವಾಸಿಂ ಅಕ್ರಮ್‌, ಶೋಯೆಬ್‌ ಮಲಿಕ್‌, ಮಿಸ್ಬಾ ಉಲ್‌ ಹಕ್‌ ಮೊದಲಾದವರು ಪಾಕ್‌ ತಂಡದ ಕಳಪೆ ಪ್ರದರ್ಶನ ಬಗ್ಗೆ ವಿಶ್ಲೇಷಣೆ ನಡೆಸಿದರು. ಆದ್ರೆ ಹಸನ್‌ ರಾಝಾ ಟೀಂ ಇಂಡಿಯಾ ಬೌಲಿಂಗ್‌ (Team India Bowling) ಮತ್ತು ಡಿಆರ್‌ಎಸ್‌ ನಿರ್ಧಾರಗಳ ಕುರಿತು ಟೀಕಿಸಿದರು. ಗುರುವಾರ (ನ.2) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಭಾರತ 302 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಕುರಿತು ಪಾಕ್‌ ಸುದ್ದಿ ನಿರೂಪಕ, ಟೀಂ ಇಂಡಿಯಾ ಬೌಲಿಂಗ್‌ ವೇಳೆ ಚೆಂಡುಗಳು ಹೆಚ್ಚಾಗಿ ಸ್ವಿಂಗ್‌ ಆಗುತ್ತಿವೆ. ಒಂದು ವೇಳೆ ಅವರಿಗೆ ವಿಶೇಷ ಚೆಂಡುಗಳನ್ನು (Speical Ball) ನೀಡುತ್ತಿದ್ದಾರೆ ಅಂತ ನಿಮಗೆ ಅನ್ನಿಸುತ್ತದೆಯೇ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಹಸನ್‌, ಟೀಂ ಇಂಡಿಯಾ ಬೌಲರ್‌ಗಳ ಸ್ವಿಂಗ್‌ ಗಮನಿಸಿದ್ರೆ ಖಂಡಿತಾ ಅನುಮಾನ ಮೂಡುತ್ತಿದೆ ಎಂದಿದ್ದಾರೆ. ಭಾರತ ಬೌಲಿಂಗ್‌ಗೆ ಇಳಿದಾಗ ಚೆಂಡು ಬದಲಾಗುತ್ತದೆ. ಬಹುಶಃ ಐಸಿಸಿ ಅಥವಾ ಬಿಸಿಸಿಐ ಭಾರತಕ್ಕೆ ವಿಶೇಷ ಚೆಂಡನ್ನು ನೀಡಬಹುದು ಅನ್ನಿಸುತ್ತದೆ. ಅಲ್ಲದೇ ಭಾರತ ತೆಗೆದುಕೊಳ್ಳುವ ಡಿಆರ್‌ಎಸ್‌ ನಿರ್ಧಾರಗಳು ತಮಗೆ ಫೇವರ್‌ ಆಗಿಯೇ ಬರುತ್ತಿದ್ದು, 3ನೇ ಅಂಪೈರ್‌ ಕೂಡ ಭಾರತದ ಪರವಾಗಿಯೇ ಇದ್ದಾರೆ ಅನ್ನಿಸುತ್ತಿದೆ. ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ ಹಾಗೂ ಶ್ರೇಯಸ್‌ ಅಯ್ಯರ್‌ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 357 ರನ್‌ ಗಳಿಸಿತ್ತು. 358 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಲಂಕಾ ಪಡೆ 19.4 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ನೆಲಕಚ್ಚಿತು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ