ಮುಂಬೈ: ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಅಫ್ಘಾನಿಸ್ತಾನ (Afghanistan) ಕ್ರಿಕೆಟ್‌ ತಂಡ ಆಸ್ಟ್ರೇಲಿಯಾ (Australia) ವಿರುದ್ಧ ಪಂದ್ಯದಲ್ಲಿ ಹಲವು ದಾಖಲೆಗಳನ್ನ ಸೃಷ್ಟಿ ಮಾಡಿದೆ. ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ 5 ವಿಕೆಟ್‌ ನಷ್ಟಕ್ಕೆ 291 ರನ್‌ ಗಳಿಸಿದ್ದು, ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ 292 ರನ್‌ಗಳ ಸವಾಲಿನ ಗುರಿ ನೀಡಿದೆ.

ಇದೇ ಪಂದ್ಯದಲ್ಲಿ ಹೊಸ ಹೊದ ದಾಖಲೆಗಳು ಸೇರ್ಪಡೆಯಾಗಿವೆ. ಆಸ್ಟ್ರೇಲಿಯಾ ಮಾರಕ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಅಫ್ಘಾನಿಸ್ತಾನದ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ (Ibrahim Zadran), ಜವಾಬ್ದಾರಿಯುತ ಶತಕ ಸಿಡಿಸಿ, ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಅಫ್ಘಾನಿಸ್ತಾನದ ಆಟಗಾರನೊಬ್ಬ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಅಲ್ಲದೇ ಜದ್ರಾನ್‌ ಶತಕ ಸಿಡಿಸಿದ ಕಿರಿಯ ವಯಸ್ಸಿನ ಕ್ರಿಕೆಟಿಗ ಎಂಬ ವಿಶೇಷ ಸಾಧನೆಗೂ ಪಾತ್ರರಾಗಿದ್ದಾರೆ. ಇದರೊಂದಿಗೆ ಅಫ್ಘಾನಿಸ್ತಾನ ತಂಡ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಗಳಿಸಿದ ಅತ್ಯಧಿಕ ಸ್ಕೋರ್‌ ಇದಾಗಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ ಒಂದೆಡೆ ವಿಕೆಟ್‌ ಕಳೆದುಕೊಂಡರೂ ಜವಾಬ್ದಾರಿಯುತ ರನ್‌ ಕಲೆಹಾಕುತ್ತಾ ಸಾಗಿತು. ಆದ್ರೆ ಕೊನೆಯಲ್ಲಿ ರಶೀದ್‌ ಖಾನ್‌ (Rashid Khan) ಮತ್ತು ಜದ್ರಾನ್‌ ಅವರ ಸ್ಫೋಟಕ ಇನ್ನಿಂಗ್ಸ್‌ನಿಂದಾಗಿ ತಂಡದ ಮೊತ್ತ 300ರ ಗಡಿ ಸಮೀಪಿಸಿತು. ಅಫ್ಘಾನಿಸ್ತಾನದ ಪರ ಇಬ್ರಾಹಿಂ ಜದ್ರಾನ್ 129 ರನ್‌ (143 ಎಸೆತ, 3 ಸಿಕ್ಸರ್‌, 8 ಬೌಂಡರಿ), ರಶೀದ್‌ ಖಾನ್‌ 35 ರನ್‌ (18 ಎಸೆತ, 3 ಸಿಕ್ಸರ್‌, 2 ಬೌಂಡರಿ ಗಳಿಸಿ ಅಜೇಯರಾಗಿ ಉಳಿದರೆ, ರಹಮಾನುಲ್ಲಾ ಗುರ್ಬಾಜ್ 21 ರನ್‌. ರಹಮತ್‌ ಶಾ 30 ರನ್‌, ಹಸ್ಮತುಲ್ಲಾ ಶಾಹಿದಿ 26 ರನ್‌, ಅಜ್ಮತುಲ್ಲಾ ಒಮರ್ಜಾಯ್ 22 ರನ್‌, ಮೊಹಮ್ಮದ್‌ ನಬಿ 12 ರನ್‌ ಗಳಿಸಿ ಔಟಾದರು. ಆಸೀಸ್‌ ಪರ 9 ಓವರ್‌ನಲ್ಲಿ 70 ರನ್‌ ಬಿಟ್ಟುಕೊಟ್ಟ ಮಿಚೆಲ್‌ ಸ್ಟಾರ್ಕ್‌ 1 ವಿಕೆಟ್‌ ಪಡೆದರೆ, ಜೋಶ್‌ ಹ್ಯಾಜಲ್‌ವುಡ್‌ 2 ವಿಕೆಟ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ ಮತ್ತು ಆಡಂ ಝಂಪಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ