ಯೂಟ್ಯೂಬ್ ಮೂಲಕವೇ ಕನ್ನಡಿಗರ ಮನಗೆದ್ದ ಹುಡುಗ. ಕನ್ನಡಿಗರಿಗೆ ಜಗತ್ತನ್ನು ತೋರಿಸುತ್ತೇನೆ ಎಂದು ಹೊರಟ ಗಗನ್ ಶ್ರೀನಿವಾಸ್ ಡಾ. ಬ್ರೋ ಆಗಿ ಕನ್ನಡಿಗರ ಮನಗೆದ್ದವರು. ಈಗಾಗಲೂ ಜಗತ್ತಿನ ಹಲವು ದೇಶಗಳನ್ನು ಕನ್ನಡಿಗರಿಗೆ ತೋರಿಸಿದ್ದಾರೆ. ವಿವಾದದಿಂದ ಸದಾ ದೂರವೇ ಇರುವ ಡಾ.
ಬ್ರೋ ಮೇಲೆ ಇದೀಗ ಬೆಂಗಳೂರಿನ ಆಟೋ ಮತ್ತು ಕ್ಯಾಬ್ ಚಾಲಕರು ಸಿಟ್ಟಾಗಿದ್ದಾರೆ.

ಕರ್ನಾಟಕ ರಾಜ್ಯ ಚಾಲಕರ ಪರಿಷತ್ ಅಧ್ಯಕ್ಷರಾಗಿರುವ ಕೆ. ಸೋಮಶೇಖರ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು ಡಾ ಬ್ರೋ ವಿರುದ್ಧ ಕಿಡಿ ಕಾರಿದ್ದಾರೆ. ಡಾ. ಬ್ರೋ ನಮ್ಮ ಯಾತ್ರಿ ಅಪ್ಲಿಕೇಷನ್ ಪ್ರಮೋಟ್ ಮಾಡಿದ್ದೇ ಚಾಲಕರ ಅಸಮಾಧಾನಕ್ಕೆ ಕಾರಣವಾಗಿದೆ.
ಡಾ. ಬ್ರೋ ಹಂಚಿಕೊಂಡಿರುವ ವಿಡಿಯೋದಲ್ಲಿ ನಮ್ಮ ಯಾತ್ರಿ ಕ್ಯಾಬ್, ಆಟೋ ಚಾಲಕರಿಗೆ ವರದಾನವಾಗಿದ್ದು ಇಲ್ಲಿ ಕಮಿಷನ್ ಇಲ್ಲ, ದಿನಕ್ಕೆ 25 ರೂಪಾಯಿ ಅಥವಾ ಪ್ರಯಾಣಕ್ಕೆ 3.5 ರೂಪಾಯಿ ಮಾತ್ರ ಕಮಿಷನ್ ಪಡೆಯುತ್ತಾರೆ ಎಂದು ಹೇಳಿದ್ದಾರೆ.
ಕೆ. ಸೋಮಶೇಖರ್ ಆರೋಪವೇನು?
ಡಾ ಬ್ರೋ ತಪ್ಪಾದ ಮಾಹಿತಿ ನೀಡುವ ಮೂಲಕ ಆಟೋ / ಕ್ಯಾಬ್ ಚಾಲಕೆ ದಾರಿ ತಪ್ಪಿಸಿದ್ದಾರೆ ಎಂದು ಕೆ. ಸೋಮಶೇಖರ್ ಆರೋಪಿಸಿದ್ದಾರೆ. ಆಪ್‌ಗಳು ಚಾಲಕರನ್ನು ಸುಲಿಗೆ ಮಾಡುತ್ತಿವೆ ಎಂದಿರುವ ಅವರು ಡಾ ಬ್ರೋ ವಿಡಿಯೋ ಡಿಲೀಟ್ ಮಾಡಬೇಕು, ಕನ್ನಡಿಗ ಚಾಲಕರ ಪರವಾಗಿ ನಿಲ್ಲಬೇಕು ಎಂದಿದ್ದಾರೆ.
ಕರ್ನಾಟಕ ರಾಜ್ಯ ಚಾಲಕರ ಪರಿಷತ್ ವತಿಯಿಂದ ಡಾ ಬ್ರೋ ಅವರಿಗೆ ಮನವಿ ಪತ್ರ ಕೂಡ ನೀಡಿರುವುದಾಗಿ ಹೇಳಿದ್ದು ಮನವಿ ಪತ್ರವನ್ನು ಹಂಚಿಕೊಂಡಿದ್ದಾರೆ. ನಾವು ಮನವಿ ಪತ್ರ ನೀಡಿ ವಿವರಿಸಿ ಹೇಳಿದ್ದರೂ ಡಾ ಬ್ರೋ ವಿಡಿಯೋ ಡಿಲೀಟ್ ಮಾಡದೆ ಶೀರ್ಷಿಕೆಯನ್ನು ಮಾತ್ರ ಬದಲಾಯಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಂಧ್ರದಲ್ಲಿ ಈಗಾಗಲೇ ಬೈಕ್ ಟ್ಯಾಕ್ಸಿ ಇದ್ದು ಬೆಂಗಳೂರಿನಲ್ಲಿ ಕೂಡ ಬರಲಿದ್ದು ಚಾಲಕರಿಗೆ ಮತ್ತಷ್ಟು ಕಷ್ಟವಾಗಲಿದೆ. ಈ ಆಪ್‌ಗಳು ಹೇಗೆಲ್ಲಾ ಸುಲಿಗೆ ಮಾಡುತ್ತವೆ ಎಂದು ನಿಮ್ಮ ವಿಡಿಯೋಗೆ ಅನೇಕ ಚಾಲಕರು ಕಾಮೆಂಟ್ ಹಾಕಿದ್ದಾರೆ ಅದನ್ನು ಒಮ್ಮೆ ನೋಡಿ, ಕೂಡಲೇ ಇಂತಹ ಆಪ್ ಪ್ರಮೋಟ್ ಮಾಡಿರುವ ವಿಡಿಯೋವನ್ನು ಡಿಲೀಟ್ ಮಾಡಿ ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಇಷ್ಟೆಲ್ಲಾ ಮನವಿ ಮಾಡಿ ನಮ್ಮ ಸಮಸ್ಯೆಯನ್ನು ವಿವರಿಸಿದರೂ ಡಾ ಬ್ರೋ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ಕೆ. ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು ಅಷ್ಟು ಜನ ಕಮೆಂಟ್ ಮಾಡಿದ್ದರು ವಿಡಿಯೋ ಡಿಲೀಟ್ ಮಾಡದೆ ನೀವು ಸಣ್ಣತನ ತೋರಿಸಿದ್ದೀರಾ, ಹಣಕ್ಕೆ ಮಾತ್ರ ಬೆಲೆ ಕೊಡುವುದು ಎಂದು ಸಾಬೀತು ಮಾಡಿದ್ದೀರಾ ಎಂದಿದ್ದಾರೆ.