ಪಿಜಿಯಲ್ಲಿ ಸ್ವಚ್ಛತೆ ಇಲ್ಲ, ಊಟ-ತಿಂಡಿ ವ್ಯವಸ್ಥೆ ಸರಿಯಾಗಿಲ್ಲ ಎಂದು ಗೂಗಲ್ ರೇಟಿಂಗ್‌ನಲ್ಲಿ ಒಂದೇ ಸ್ಟಾರ್ ನೀಡಿದ್ದಕ್ಕೆ ಪಿಜಿ ಮಾಲೀಕ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿಯಲ್ಲಿ ನಡೆದಿದೆ.

ವಿಕಾಸ್ (19) ಹಲ್ಲೆಗೊಳಗಾದ ವಿದ್ಯಾರ್ಥಿ. ಕಲಬುರಗಿ ಮೂಲದ ವಿದ್ಯಾರ್ಥಿ ವಿಕಾಸ್ ಕಳೆದ ಆರು ತಿಂಗಳಿನಿಂದ ಕದ್ರಿ ಬಾಯ್ಸ್ ಪಿಜಿಯಲ್ಲಿ ವಾಸವಾಗಿದ್ದ. ಆದರೆ ಪಿಜಿಯಲ್ಲಿ ಸರಿಯಾದ ಊಟ-ತಿಂಡಿಯ ವ್ಯವಸ್ಥೆ ಇಲ್ಲ, ಸ್ವಚ್ಛತೆ ಸರಿಯಾಗಿಲ್ಲ, ಶೌಚಾಲಯ, ನೀರಿನ ವ್ಯವಸ್ಥೆಯೂ ಸೂಕ್ತವಾಗಿಲ್ಲ ಎಂದು ರೋಸಿ ಹೋಗಿದ್ದ. ಹಲವು ಬಾರಿ ಈ ವಿಚಾರಗಳನ್ನು ಮಾಲೀಕನ ಗಮನಕ್ಕೂ ತಂದಿದ್ದ.
ಆದರೆ ಪಿಜಿ ಮಾಲೀಕ ತನ್ನ ಪಿಜಿಗೆ ಗೂಗಲ್ ರೇಟಿಂಗ್ಸ್‌ನಲ್ಲಿ ಹೆಚ್ಚಿನ ಸ್ಟಾರ್‌ಗಳನ್ನು ನೀಡಬೇಕೆಂದು ವಿದ್ಯಾರ್ಥಿಗೆ ಧಮ್ಕಿ ಹಾಕಿದ್ದ. ಹೆಚ್ಚು ಸ್ಟಾರ್ ಕೊಡದಿದ್ದರೆ ತೊಂದರೆ ಕೊವುದಾಗಿ ಬೆದರಿಕೆ ಹಾಕಿದ್ದ. ಪಿಜಿಯ ಅವ್ಯವಸ್ಥೆಯಿಂದ ಬೇಸತ್ತ ವಿದ್ಯಾರ್ಥಿ ಗೂಗಲ್‌ನಲ್ಲಿ ಒಂದೇ ಸ್ಟಾರ್ ರೇಟಿಂಗ್ ನೀಡಿದ್ದಾನೆ.
ಇದರಿಂದ ಕೋಪಗೊಂಡ ಪಿಜಿ ಮಾಲೀಕ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದಾನೆ. ನೊಂದ ವಿದ್ಯಾರ್ಥಿ ಪಿಜಿ ಮಾಲೀಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ.