ಕೋಲ್ಕತ್ತಾ: ಮಸೀದಿಗೆ ತೆರಳುತ್ತಿದ್ದ ತೃಣಮೂಲ ಕಾಂಗ್ರೆಸ್‌ (TMC) ನಾಯಕನನ್ನು ಕೆಲ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ. ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಬಮಂಗಾಚಿ ಪಂಚಾಯತ್ ಸದಸ್ಯ ಮತ್ತು ಟಿಎಂಸಿ ಪ್ರದೇಶದ ಅಧ್ಯಕ್ಷ ಸೈಫುದ್ದೀನ್ ಲಷ್ಕರ್ (43) ಮೇಲೆ ದುಷ್ಕರ್ಮಿಗಳು ಒಂದು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಗೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದ್ದು, ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಬರುಯಿಪುರ್ ಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿ ಪಲಾಶ್ ಚಂದ್ರ ಧಾಲಿ ತಿಳಿಸಿದ್ದಾರೆ.

ಸಿಪಿಎಂ ಗೂಂಡಾಗಳು ಬಿಜೆಪಿಯೊಂದಿಗೆ ಕೈಜೋಡಿಸಿ ಸೈಫುದ್ದೀನ್ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಸೈಫುದ್ದೀನ್ ಅವರ ತಂದೆ ಇಲ್ಯಾಸ್ ಲಷ್ಕರ್ ಕೂಡ ಸಿಪಿಎಂನತ್ತ ಬೆರಳು ತೋರಿದ್ದಾರೆ. ಯಾರೂ ತಮ್ಮ ಮಗನೊಂದಿಗೆ ಯಾವುದೇ ದ್ವೇಷವನ್ನು ಹೊಂದಿಲ್ಲ. ಇದು ಸಂಚು ರೂಪಿಸಿ ನಡೆಸಿರುವ ಹತ್ಯೆ ಎಂದು ಆರೋಪಿಸಿದ್ದಾರೆ. ಬೆಳಗಿನ ಜಾವ ಮಸೀದಿಗೆ ತೆರಳುತ್ತಿದ್ದ ಬಮಂಗಚಿ ಪಂಚಾಯತ್ ಅಧ್ಯಕ್ಷೆ ಪತಿ ಸೈಫುದ್ದೀನ್ ಮೇಲೆ ಐವರು ದುಷ್ಕರ್ಮಿಗಳು ಎರಡು ಬೈಕ್‌ಗಳಲ್ಲಿ ಬಂದು ಗುಂಡು ಹಾರಿಸಿದ್ದಾರೆ. ಭುಜಕ್ಕೆ ಗುಂಡು ಬಡಿದ ನಂತರ ಸೈಫುದ್ದೀನ್ ರಸ್ತೆಯಲ್ಲಿ ಕುಸಿದುಬಿದ್ದರು. ಗುಂಡಿನ ಸದ್ದು ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿದಾಗ ಸೈಫುದ್ದೀನ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಜೋಯ್‌ನಗರ 1 ಬ್ಲಾಕ್‌ನಲ್ಲಿರುವ ಪದ್ಮರಹತ್ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸೈಫುದ್ದೀನ್‌ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ