ಮುಂಬೈ: ಮೊಹಮ್ಮದ್‌ ಶಮಿ ಬೆಂಕಿ ಬೌಲಿಂಗ್‌ ದಾಳಿ ಹಾಗೂ ಸಂಘಟಿತ ಬ್ಯಾಟಿಂಗ್‌ ನೆರವಿನಿಂದ ಟೀಂ ಇಂಡಿಯಾ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ 70 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 4ನೇ ಬಾರಿಗೆ ಫೈನಲ್‌ ಪ್ರವೇಶಿಸಿದೆ. ಅಷ್ಟೇ ಅಲ್ಲದೇ 2019ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದೆ. ವಿಶ್ವಕಪ್‌ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 4 ವಿಕೆಟ್‌ ನಷ್ಟಕ್ಕೆ 50 ಓವರ್‌ಗಳಲ್ಲಿ 397 ರನ್‌ ಕಲೆಹಾಕಿತ್ತು.

398 ರನ್‌ಗಳ ಗುರಿ ಬೆನ್ನತ್ತಿದ್ದ ಕಿವೀಸ್‌ 48.5 ಓವರ್‌ಗಳಲ್ಲೇ 327 ರನ್‌ ಗಳಿಗೆ ಸರ್ವಪತನ ಕಂಡಿತು. ಇದರಿಂದ ಟೀಂ ಇಂಡಿಯಾ ಸತತ 10ನೇ ಜಯದೊಂದಿಗೆ ಫೈನಲ್‌ ಪ್ರವೇಶಿಸಿತು. ಕಿವೀಸ್‌ ಗೆಲುವಿಗೆ ಕೊನೆಯ 10 ಓವರ್‌ಗಳಲ್ಲಿ 132 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್‌ಗೆ ಬಂದ ಮೊಹಮ್ಮದ್‌ ಸಿರಾಜ್‌ 41ನೇ ಓವರ್‌ನಲ್ಲಿ 20 ರನ್‌ ಬಿಟ್ಟುಕೊಟ್ಟರು. ಆದ್ರೆ 42ನೇ ಓವರ್‌ನಲ್ಲಿ ಕುಲ್ದೀಪ್‌ ಯಾದವ್‌ ಕೇವಲ 2 ರನ್‌ ನೀಡಿ ನಿಯಂತ್ರಣಕ್ಕೆ ತಂದರು. 43ನೇ ಓವರ್‌ನಲ್ಲಿ 7 ರನ್‌ ಬಿಟ್ಟುಕೊಟ್ಟರೂ ಗ್ಲೇನ್‌ ಫಿಲಿಪ್ಸ್‌ ಅವರ ಪ್ರಮುಖ ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು. 44ನೇ ಓವರ್‌ನಲ್ಲಿ ತನ್ನ ಕೊನೆಯ ಓವರ್‌ ಎಸೆದ ಕುಲ್ದೀಪ್‌ ಒಂದು ವಿಕೆಟ್‌ ಕಬಳಿಸುವ ಜೊತೆಗೆ 4 ರನ್‌ ಬಿಟ್ಟುಕೊಟ್ಟರು. 45ನೇ ಓವರ್‌ನಲ್ಲಿ ಮತ್ತೆ ಬುಮ್ರಾ 7 ರನ್‌ ಬಿಟ್ಟುಕೊಟ್ಟರು. ಇನ್ನೂ 5 ಓವರ್‌ಗಳಲ್ಲಿ 92 ರನ್‌ ಬೇಕಿತ್ತು. ಅಷ್ಟರಲ್ಲೇ ಸಿಕ್ಸರ್‌ ಸಿಡಿಸುವ ಪ್ರಯತ್ನಕ್ಕೆ ಮುಂದಾದ ಮಿಚೆಲ್‌ ಶಮಿ ಬೌಲಿಂಗ್‌ನಲ್ಲಿ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ನೀಡಿ ಔಟಾದರು. ಇದರೊಂದಿಗೆ ಕಿವೀಸ್‌ ಗೆಲುವಿನ ಕನಸು ಸಹ ಭಗ್ನಗೊಂಡಿತು. ಇನ್ನುಳಿದಂತೆ ಕೊನೆಯ ಕೊನೆಯ 4 ಓವರ್‌ಗಳಲ್ಲಿ ಕ್ರಮವಾಗಿ 2, 5,7,7 ಸೇರ್ಪಡೆಯಾಯಿತು. 398 ರನ್‌ಗಳ ಗುರಿ ಬೆನ್ನತ್ತಿದ್ದ ಕಿವೀಸ್‌ ಪಡೆ ಸ್ಫೋಟಕ ಇನ್ನಿಂಗ್ಸ್‌ಗೆ ಮುಂದಾಗಿತ್ತು. ಆದ್ರೆ 30 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡ ಕಿವೀಸ್‌, ಮುಂದಿನ 9 ರನ್‌ಗಳ ಅಂತರದಲ್ಲೇ ಮತ್ತೊಂದು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ಡೇರಿಲ್‌ ಮಿಚೆಲ್‌ ಜೋಡಿ ಭರ್ಜರಿ ಜೊತೆಯಾಟ ನೀಡಿತ್ತು. 3ನೇ ವಿಕೆಟ್‌ಗೆ ಈ ಜೋಡಿ 149 ಎಸೆತಗಳಲ್ಲಿ 181 ರನ್‌ಗಳ ಜೊತೆಯಾಟ ನೀಡಿತ್ತು. ಇದರಿಂದ ಕೊನೆಯ 18.2 ಓವರ್‌ಗಳಲ್ಲಿ 184 ರನ್‌ಗಳ ಅಗತ್ಯವಿತ್ತು. ಅಷ್ಟರಲ್ಲಿ ತಮ್ಮ ಮಾರಕ ದಾಳಿ ಪ್ರದರ್ಶಿಸಿದ ಮೊಹಮ್ಮದ್‌ ಶಮಿ ವಿಲಿಯಮ್ಸನ್‌ ಆಟಕ್ಕೆ ಬ್ರೇಕ್‌ ಹಾಕಿದರು. ವಿಲಿಮ್ಸನ್‌ ಔಟಾದ ಬೆನ್ನಲ್ಲೇ ಟಾಮ್‌ ಲಾಥಮ್‌ 2 ಎಸೆತಗಳಲ್ಲೇ ಡಗೌಟ್‌ ಆದರು. ಕೊನೆಯವರೆಗೂ ಏಕಾಂಗಿಯಾಗಿ ಹೋರಾಡಿದ ಡೇರಿಲ್‌ ಮಿಚೆಲ್‌ 119 ಎಸೆತಗಳಲ್ಲಿ 134 ರನ್‌ (7 ಸಿಕ್ಸರ್‌, 9 ಬೌಂಡರಿ) ಚಚ್ಚಿ ಔಟಾದರು. ಡೆವೋನ್‌ ಕಾನ್ವೆ 13 ರನ್‌, ರಚಿನ್‌ ರವೀಂದ್ರ 13 ರನ್‌, ಕೇನ್‌ ವಿಲಿಯಮ್ಸನ್‌ 69 ರನ್‌ (73 ಎಸೆತ, 8 ಬೌಂಡರಿ, 1 ಸಿಕ್ಸರ್)‌, ಗ್ಲೇನ್‌ ಫಿಲಿಪ್ಸ್‌ 33 ಎಸೆತಗಳಲ್ಲಿ 41 ರನ್‌ (2 ಸಿಕ್ಸರ್‌, 4 ಬೌಂಡರಿ), ಮಾರ್ಕ್‌ ಚಾಪ್ಮನ್‌ 2 ರನ್‌, ಮಿಚೆಲ್‌ ಸ್ಯಾಂಟ್ನರ್‌ 8 ರನ್‌, ಟಿಮ್‌ ಸೌಥಿ 9 ರನ್‌, ಟ್ರೆಂಟ್‌ ಬೌಲ್ಟ್‌ 2 ರನ್‌, ಲಾಕಿ ಫರ್ಗೂಸನ್‌ 6 ರನ್‌ ಗಳಿಸಿದರು. ಶಮಿ ಶೈನ್:‌ ಟೀಂ ಇಂಡಿಯಾ ಪರ ಸಾಮರ್ಥ್ಯ ಪ್ರದರ್ಶಿಸಿದ ಮೊಹಮ್ಮದ್‌ ಶಮಿ 9.5 ಓವರ್‌ಗಳಲ್ಲಿ 57 ರನ್‌ ಬಿಟ್ಟು ಕೊಟ್ಟು 7 ವಿಕೆಟ್‌ ಪಡೆದರು. ಈ ಮೂಲಕ 48 ವರ್ಷಗಳ ವಿಶ್ವಕಪ್‌ ಇತಿಹಾಸದಲ್ಲೇ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಮೊದಲ ಬೌಲರ್‌ ಎಂಬ ಖ್ಯಾತಿಗೂ ಪಾತ್ರರಾದರು. ಇನ್ನುಳಿದಂತೆ ಬುಮ್ರಾ, ಸಿರಾಜ್‌, ಕುಲ್ದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು. ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ, ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಮತ್ತು ಶುಭಮನ್‌ ಗಿಲ್‌ ಜೋಡಿ ಮೊದಲ ವಿಕೆಟ್‌ಗೆ 50 ಎಸೆತಗಳಲ್ಲಿ 71 ರನ್‌ಗಳ ಜೊತೆಯಾಟ ನೀಡಿತು. ರೋಹಿತ್‌ ಶರ್ಮಾ ಔಟಾಗುತ್ತಿದ್ದಂತೆ 2ನೇ ವಿಕೆಟ್‌ಗೆ 93 ರನ್‌ಗಳ ಜೊತೆಯಾಟ ನೀಡಿದ್ದರು. ಆದ್ರೆ ಕಾಲುನೋವಿನಿಂದಾಗಿ ಶುಭಮನ್‌ ಗಿನ್‌ ಅರ್ಧಕ್ಕೆ ಕ್ರೀಸ್‌ನಿಂದ ಹೊರನಡೆದರು. ಈ ನಡುವೆ ಕಿವೀಸ್‌ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ವಿರಾಟ್‌ ಕೊಹ್ಲಿ ಮತ್ತು ಶ್ರೇಯಸ್‌ ಅಯ್ಯರ್‌ ಜೋಡಿ 128 ಎಸೆತಗಳಲ್ಲಿ 163 ರನ್‌ ಕಲೆಹಾಕಿತು. ಕೊಹ್ಲಿ ಶತಕ ಸಿಡಿಸಿ ಔಟಾದ ಬಳಿಕ ಕ್ರೀಸ್‌ಗಿಳಿಯುತ್ತಿದ್ದಂತೆ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾದ ಕೆ.ಎಲ್‌ ರಾಹುಲ್‌, ಶ್ರೇಯಸ್‌ ಅಯ್ಯರ್‌ ಜೊತೆಗೂಡಿ 29 ಎಸೆತಗಳಲ್ಲೇ 54 ರನ್‌ಗಳ ಜೊತೆಯಾಟ ನೀಡಿದರು. ಇದರಿಂದಾಗಿ ತಂಡದ ಮೊತ್ತ 400 ರನ್‌ಗಳ ಗಡಿ ಸಮೀಪಿಸುವಲ್ಲಿ ಯಶಸ್ವಿಯಾಯಿತು.

ರೋಹಿತ್‌ ಶರ್ಮಾ 47 ರನ್‌ (40 ಎಸೆತ, 4 ಸಿಕ್ಸರ್‌, 4 ಬೌಂಡರಿ), ಶುಭಮನ್‌ ಗಿಲ್‌ 80 ರನ್‌ (66 ಎಸೆತ, 3 ಸಿಕ್ಸರ್‌, 8 ಬೌಂಡರಿ), ವಿರಾಟ್‌ ಕೊಹ್ಲಿ 117 ರನ್‌ (113 ಎಸೆತ, 9 ಬೌಂಡರಿ, 2 ಸಿಕ್ಸರ್)‌, ಶ್ರೇಯಸ್‌ ಅಯ್ಯರ್‌ 105 ರನ್‌ (70 ಎಸೆತ, 8 ಸಿಕ್ಸರ್‌, 4 ಬೌಂಡರಿ), ಕೆ.ಎಲ್‌ ರಾಹುಲ್‌ 39 ರನ್‌ (20 ಎಸೆತ, 5 ಬೌಂಡರಿ, 2 ಸಿಕ್ಸರ್)‌, ಸೂರ್ಯಕುಮಾರ್‌ ಯಾದವ್‌ 1 ರನ್‌ ಗಳಿಸಿದರು.

ಕಿವೀಸ್‌ ಪರ ಟಿಮ್‌ ಸೌಥಿ 10 ಓವರ್‌ಗಳಲ್ಲಿ 100 ರನ್‌ ಚಚ್ಚಿಸಿಕೊಂಡು 3 ವಿಕೆಟ್‌ ಕಿತ್ತರೆ, ಟ್ರೆಂಟ್‌ ಬೌಲ್ಟ್‌ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ